ಬಂಟ್ವಾಳ: ಶಾಲಾ ಮಕ್ಕಳ ಚಾಲಕ ಮತ್ತು ಮಾಲೀಕರ ಸಂಘ ದ.ಕ ಬಂಟ್ವಾಳ ಇವರ ವತಿಯಿಂದ ನಾಳೆಯಿಂದ ಎರಡು ದಿನಗಳ ಕಾಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಯಲಿದೆ. ಶಾಲಾ ಮಕ್ಕಳ ಸಂಚಾರಕ್ಕೆ ಕಾನೂನಿನ ಪ್ರಕಾರ ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಟೆಂಪೋ ಮಾಲೀಕ ಚಾಲಕರ ಸಂಘದ ಅಧ್ಯಕ್ಷ ಸದಾನಂದ ನಾವೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕು ಶಾಲಾ ಮಕ್ಕಳ ವಾಹನ ಚಾಲಕರು ಹಾಗೂ ಮಾಲೀಕರಿಗೆ ಪೊಲೀಸ್ ಇಲಾಖೆ ಕೋರ್ಟ್ ಆದೇಶದ ನೆಪದಲ್ಲಿ ವಾಹನ ತಪಾಸಣೆ ಮಾಡಿ ನಿಲ್ಲಿಸುತ್ತಿದ್ದಾರೆ. ಇದರಿಂದ ಶಾಲೆಗೆ ಮಕ್ಕಳನ್ನು ತಲುಪಿಸುವಾಗ ತಡವಾಗುತ್ತದೆ. ಅದಲ್ಲದೆ ಚಾಲಕರ ಲೈಸನ್ಸ್ ಮುಟ್ಟುಗೋಲು ಹಾಕಿ, ವಾಹನದ ಮೇಲೆ ಕೇಸ್ ದಾಖಲಿಸುತ್ತಾರೆ. ಅಂತೆಯೇ ಚಾಲಕರಿಗೆ 2000 ದಿಂದ 5000 ರೂ.ವರೆಗೆ ಕೋರ್ಟ್ ದಂಡ ಹಾಕುತ್ತಿದೆ. ಇದರಿಂದ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಕಷ್ಟವಾಗುತ್ತಿದೆ ಎಂಬುದು ಚಾಲಕರ ದೂರು.
ಶಾಲಾ ಮಕ್ಕಳನ್ನು ವಾಹನ ಮಿತಿಯ ಎರಡು ಪಟ್ಟು ಕರೆದುಕೊಂಡು ಹೋಗಲು ಅನುಮತಿ ನೀಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಬಂಟ್ವಾಳ ತಾಲೂಕಿನ ಎಲ್ಲಾ ಶಾಲಾ ವಾಹನ ಚಾಲಕ, ಮಾಲಿಕರು ಹಾಗೂ ಮಕ್ಕಳ ಪೋಷಕರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ. ಮಂಗಳೂರು ಶಾಲಾ ಮಕ್ಕಳ ವಾಹನ ಚಾಲಕರು ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡಿದ್ದು ಇದಕ್ಕೆ ಬಂಟ್ವಾಳದ ಶಾಲಾ ಮಕ್ಕಳ ವಾಹನ ಚಾಲಕರ ಬೆಂಬಲ ಘೋಷಿಸಿದೆ.
ಪೊಲೀಸರ ಈ ಕ್ರಮದಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ಬಗ್ಗೆ ನಿಯಮದಲ್ಲಿ ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿ ನಾಳೆ ಬಿಸಿರೋಡಿನಲ್ಲಿ ಎ.ಎಸ್.ಪಿ. ಸೈದುಲು ಅಡಾವತ್, ತಹಶೀಲ್ದಾರ್ ರಶ್ಮಿ ಅವರಿಗೆ ಮನವಿ ಮಾಡಲಾಗುವುದು ಎಂದು ಟೆಂಪೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಸದಾನಂದ ನಾವೂರ ತಿಳಿಸಿದ್ದಾರೆ.