ಮಂಗಳೂರು: ಕಾನೂನು ಪಾಲನೆ ಹೆಸರಿನಲ್ಲಿ ಶಾಲಾ ಮಕ್ಕಳ ವಾಹನ ಚಾಲಕರ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮಕ್ಕಳ ವಾಹನ ಚಾಲಕರು ಜು. 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸುಮಾರು 5,000 ಮಕ್ಕಳ ಶಾಲಾ ವಾಹನಗಳು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಈ ಪ್ರತಿಭಟನೆ ಬಗ್ಗೆ ಎಲ್ಲ ಶಾಲೆ ಮತ್ತು ಮಕ್ಕಳ ಪೋಷಕರಿಗೆ ತಿಳಿಸಲಾಗಿದೆ ಎಂದು ಸಂಘದ ಪ್ರಮುಖರು ಹೇಳಿದ್ದಾರೆ. ಈ ನಡುವೆ ಪ್ರತಿಭಟನೆಗೆ ಅವಕಾಶ ಇಲ್ಲ ಎಂಬುದಾಗಿ ಈಗಾಗಲೇ ಸಂಘದವರಿಗೆ ತಿಳಿಸಲಾಗಿದ್ದು, ಪ್ರತಿಭಟನೆ ನಡೆಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಮಂಗಳೂರು ನಗರದಲ್ಲಿ ಸುಮಾರು 2,000 ಮತ್ತು ಜಿಲ್ಲೆಯಲ್ಲಿ ಸುಮಾರು 5,000 ರಿಕ್ಷಾ, ಓಮ್ನಿ, ಮ್ಯಾಕ್ಸಿಕ್ಯಾಬ್, ಮಿನಿ ಬಸ್‍ಗಳು ಮಕ್ಕಳನ್ನು ದಿನನಿತ್ಯ ಶಾಲೆಗೆ ಬಿಡುವ ಕೆಲಸವನ್ನು ಮಾಡುತ್ತಿವೆ. ಮಕ್ಕಳನ್ನು ಖಾಸಗಿ ವಾಹನಗಳಲ್ಲಿ ಶಾಲೆಗೆ ಕರೆದೊಯ್ಯುವಾಗ ಇಂತಿಷ್ಟೇ ಮಕ್ಕಳನ್ನು ಸಾಗಿಸಬೇಕೆಂಬ ನಿಯಮವಿದೆ. ಕೆಲವು ವಾಹನ ಚಾಲಕರು ನಿಯಮವನ್ನು ಗಾಳಿಗೆ ತೂರಿ ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ತಪಾಸಣೆ ನಡೆಸಿ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.
ಎಲ್ಲೋ ಆದ ಘಟನೆಗಳನ್ನು ನೆಪ ಮಾಡಿಕೊಂಡು ಕಾನೂನು ರಕ್ಷಣೆಯ ಹೆಸರಿನಲ್ಲಿ ಪೊಲೀಸರು ಶಾಲಾ ಮಕ್ಕಳ ವಾಹನ ಚಾಲಕರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಅತ್ತಾವರ ತಿಳಿಸಿದ್ದಾರೆ. ಜು. 11ರಿಂದ ಮುಷ್ಕರ ನಡೆಯಲಿದ್ದು, 12ರಂದು ಬೆಳಗ್ಗೆ 10ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನ ಪ್ರದರ್ಶನ ಜರಗಲಿದೆ.