Monday, November 25, 2024
ಸುದ್ದಿ

ಪ್ರಾಣಿಗಳ ಹಿತದೃಷ್ಟಿಯಿಂದ ಬಂಡೀಪುರದ ಸಫಾರಿ ಮಾರ್ಗವನ್ನು ವಿಸ್ತರಿಸಲು ಮುಂದಾದ ಅರಣ್ಯ ಇಲಾಖೆ – ಕಹಳೆ ನ್ಯೂಸ್

ಮೈಸೂರು: ಪ್ರಾಣಿಗಳ ಹಿತದೃಷ್ಟಿಯಿಂದ ಇನ್ನು ಮುಂದೆ ಬಂಡೀಪುರದ ಸಫಾರಿ ಮಾರ್ಗವನ್ನು ವಿಸ್ತರಿಸಲು ಅರಣ್ಯ ಇಲಾಖೆ ಮುಂದಾಗಿದೆ.

10 ಮೀಟರ್ ಅಗಲದ ಸಫಾರಿ ರಸ್ತೆಯ ಜಾಗವನ್ನು 20 ಮೀಟರ್ ಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಈ ಜಾಗದಲ್ಲಿ ಮಾರ್ಗ ಮಧ್ಯ ಇರುವ ಮರಗಳನ್ನು ಕಡಿಯದೇ ಅವುಗಳನ್ನು ಹಾಗೆಯೇ ಉಳಿಸಿಕೊಂಡು ಪೊದೆ ಹಾಗೂ ಕುರುಚಲು ಗಿಡಗಳನ್ನು ಮಾತ್ರ ತೆರವುಗೊಳಿಸಿ ಮಾರ್ಗ ವಿಸ್ತರಣೆಗೆ ಉದ್ದೇಶಿಸಲಾಗಿದೆ. ಸಫಾರಿ ಮಾರ್ಗದಲ್ಲಿನ ಪೊದೆಗಳ ನಡುವಿಂದ ಪ್ರಾಣಿಗಳು ಏಕಾಏಕಿ ಸಫಾರಿ ವಾಹನಕ್ಕೆ ಎದುರಾಗುತ್ತಿದ್ದ ಕಾರಣ ಮಾರ್ಗ ವಿಸ್ತರಣೆಗೆ ಇಲಾಖೆ ಮುಂದಾಗಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಬಂಡೀಪುರ ಅರಣ್ಯ ವ್ಯಾಪ್ತಿಯ 256 ಕಿ.ಮೀ. ಸಫಾರಿ ಮಾರ್ಗದಲ್ಲಿ ಕೇವಲ 68 ಕಿ.ಮೀ. ಮಾರ್ಗದಲ್ಲಿ ಮಾತ್ರ ಸಫಾರಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ರಸ್ತೆ ಅಗಲ ಇರುವುದು ಕೇವಲ 10 ಮೀಟರ್. ಎದುರು ಬದಿಯಿಂದ ಮತ್ತೊಂದು ಸಫಾರಿ ವಾಹನ ಬಂದರೆ ಸಂಚಾರ ಕಷ್ಟವಾಗುತ್ತಿತ್ತು. ಅಲ್ಲದೇ ರಸ್ತೆಗೆ ಹೊಂದಿಕೊಂಡಂತೆ ದಟ್ಟವಾದ ಪೊದೆಗಳು, ಲಂಟಾನ ಗಿಡ ಬೆಳೆದುಕೊಂಡಿದ್ದರಿಂದ ಆನೆಗಳು ಅಡಗಿದ್ದರೂ ತಿಳಿಯುತ್ತಿರಲಿಲ್ಲ. ಒಮ್ಮೊಮ್ಮೆ ಪೊದೆಯಲ್ಲಿದ್ದ ಆನೆ ದಿಢೀರನೆ ವಾಹನವನ್ನು ಅಡ್ಡಗಟ್ಟುವ, ದಾಳಿಗೆ ಮುಂದಾಗುವ ಪ್ರಸಂಗಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಫಾರಿ ಮಾರ್ಗದ ವಿಸ್ತರಣೆಗೆ ಇಲಾಖೆ ಕ್ರಮ ಕೈಗೊಂಡಿದೆ.

ಅಂದಾಜು 35 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸುವುದಕ್ಕೆ ಈಗಾಗಲೇ ಅರಣ್ಯ ಇಲಾಖೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಪ್ರವಾಸಿಗರ ಹಿತ ಕಾಯುವ ನಿಟ್ಟಿನಲ್ಲಿ ರಸ್ತೆ ವಿಸ್ತರಣೆ ಮಾಡಲೇಬೇಕಾದ ಅನಿವಾರ್ಯತೆಯನ್ನು ಇಲಾಖೆ ಹಿರಿಯ ಅಧಿಕಾರಿಗಳು ಮನಗಂಡಿದ್ದು, ಸಮ್ಮತಿ ಸೂಚಿಸಿದ್ದಾರೆ. ಶೀಘ್ರವೇ ಕಾಮಗಾರಿ ಆರಂಭವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.