ವಿವೇಕಾನಂದ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ: ಸಾರ್ವಜನಿಕರು ಮಧ್ಯವರ್ತಿಗಳಿಂದ ಮುಕ್ತರಾಗಿ: ಎಸಿಬಿ ಅಧಿಕಾರಿ ಯೋಗೀಶ್ ನಾಯ್ಕ್ – ಕಹಳೆ ನ್ಯೂಸ್
ಪುತ್ತೂರು: ಸರಕಾರದಿಂದ ದೊರೆಯುವ ಹಲವು ಸವಲತ್ತುಗಳ ಮಾಹಿತಿಯನ್ನು ಜನರು ಸರಿಯಾಗಿ ತಿಳಿದುಕೊಳ್ಳುತ್ತಿಲ್ಲ. ಇದರ ಪರಿಣಾಮ ಪ್ರತಿಯೊಂದು ಕೆಲಸವನ್ನೂ ಮಧ್ಯವರ್ತಿಗಳ ಮುಖಾಂತರ ಮಾಡಿಸುತ್ತಿದ್ದೇವೆ. ಈ ಪ್ರಕ್ರಿಯೆ ಸರಕಾರದ ಎಲ್ಲಾ ಇಲಾಖೆಗಳಲ್ಲೂ ನಡೆಯುತ್ತಿದೆ. ಸಾರ್ವಜನಿಕರು ತಾವೇ ಸ್ವತಃ ಸರಕಾರಿ ಕೆಲಸದಲ್ಲಿ ಮಧ್ಯವರ್ತಿಗಳ ಸಹಾಯವಿಲ್ಲದೆ ನಡೆಸುವಂತಾಗಬೇಕು ಎಂದು ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಇನ್‍ಸ್ಪೆಕ್ಟರ್ ಯೋಗೀಶ್ ಕುಮಾರ್ ನಾಯ್ಕ್ ಬಿ.ಸಿ. ಅಭಿಪ್ರಾಯಪಟ್ಟರು.
ಅವರು ಜು.11ರಂದು ವಿವೇಕಾನಂದ ಮಹಾವಿದ್ಯಾಲಯದಲ್ಲಿ 2019-20ರ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರದ ಯೋಜನೆಗಳು ಯಶಸ್ವಿಯಾಗದಿರುವುದಕ್ಕೆ ಸಾರ್ವಜನಿಕರಲ್ಲಿ ಮಾಹಿತಿ ಕೊರತೆ ಇರುವುದೇ ಕಾರಣ. ಸಾರ್ವಜನಿಕರಿಗೆ ಸ್ವತಃ ಮಾಡಬಹುದಾದ ಕಾರ್ಯಕ್ಕೂ ಮಧ್ಯವರ್ತಿಗಳ ಅನಿವಾರ್ಯತೆ ಸೃಷ್ಟಿಯಾಗಿರುವುದು ವಿಷಾದಕರ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳಿಗಾಗಿ ಸ್ವಲ್ಪ ಸಮಯವನ್ನು ಮೀಸಲಿರಿಸಿಕೊಳ್ಳಬೇಕು ಹಾಗೂ ಸೂಕ್ತ ಮಾಹಿತಿ, ಸೂಚನೆಗಳನ್ನು ಪಾಲಿಸಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದವನ್ನು ನೀಡದೆ ಸರಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸರಕಾರದ ಯೋಜನೆಗೆ ಮಧ್ಯವರ್ತಿಗಳ ಹಾವಳಿಯಿಂದ ದುಬಾರಿ ಹಣವನ್ನು ತೆರಬೇಕಾದ ಪರಿಸ್ಥಿತಿ ಉಂಟಾಗಿದೆ. 200 ರೂ. ಗಳಲ್ಲಿ ದೊರೆಯುವ ವಾಹನ ಚಾಲನ ಪರವಾನಿಗೆಗೆ ಇಂದು ನಾಲ್ಕರಿಂದ ಐದು ಸಾವಿರದಷ್ಟು ಹಣವನ್ನು ಮಧ್ಯವರ್ತಿಗಳಿಗೆ ನೀಡಿ ಲೈಸೆನ್ಸ್ ಪಡೆದುಕೊಳ್ಳುತ್ತಿದ್ದೇವೆ. ಇಂತಹ ಅನೇಕ ಸಂಗತಿಗಳನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಮಧ್ಯವರ್ತಿಗಳಿಗೆ ಹಣಕೊಡುವುದನ್ನು ನಿಲ್ಲಿಸಿ ನಾವೇ ನಮ್ಮ ಕಾರ್ಯವನ್ನು ಮಾಡಿಕೊಂಡಾಗ ಹಣದ ದುರುಪಯೋಗ ತಪ್ಪುತ್ತದೆ ಎಂದು ತಿಳಿಸಿದರಲ್ಲದೆ ಆಧುನಿಕ ತಂತ್ರಜ್ಞಾನಗಳ ಮುಖಾಂತರ ಹಣ ದೋಚುವ ಕೆಲಸ ಹೆಚ್ಚೆಚ್ಚು ನಡೆಯುತ್ತಿದೆ. ಹಾಗಾಗಿ ಎಟಿಎಂ ಬಳಕೆ ಹಾಗೂ ಆನ್‍ಲೈನ್ ಪರ್ಚೆಸಿಂಗ್ ನಡೆಸುವಾಗ ಜಾಗರೂಕತೆ ವಹಿಸಬೇಕು ಹಾಗೂ ಮೊಬೈಲ್‍ಗಳಿಗೆ ಫೇಕ್ ಮೆಸೇಜ್‍ಗಳು ಬರುತ್ತವೆ. ಅವುಗಳ ಬಗ್ಗೆ ಎಚ್ಚರಿಕೆಯಿಂದ ವ್ಯವಹಾರಗಳನ್ನು ನಡೆಸುವಂತೆ ತಿಳಿಸಿದರು.
ಪ್ರಾಂಶುಪಾಲ ಡಾ. ಪೀಟರ್‍ವಿಲ್ಸನ್ ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಸಮೂಹದ ಸಮಸ್ಯೆಗಳಿಗೆ ವಿದ್ಯಾರ್ಥಿ ಸಂಘದ ಮೂಲಕ ಪರಿಹಾರವನ್ನು ಕಂಡುಕೊಳ್ಳುವುದು ಒಂದು ಜವಾಬ್ದಾರಿಯಾದರೆ. ಅದರೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ಧನಾತ್ಮಕ ಚಿಂತನೆಗಳೊಂದಿಗೆ ರಚನಾತ್ಮಕ ಕೆಲಸವನ್ನು ಮಾಡುವಂತೆ ಪ್ರೇರೇಪಿಸುವುದು ವಿದ್ಯಾರ್ಥಿ ಸಂಘದ ಮುಖ್ಯ ಕರ್ತವ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ ಭಟ್, ವಿದ್ಯಾರ್ಥಿ ನಾಯಕರು ತಮಗೊಪ್ಪಿಸಿದ ಜವಾಬ್ದಾರಿಯನ್ನು ನಿರ್ವಹಿಸಿ ಕಾಲೇಜಿನ ಏಳಿಗೆಗೆ ಶ್ರಮಿಸಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಪ್ರೊ. ಕೃಷ್ಣ ಕಾರಂತ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜು ಆಡಳಿತ ಮಂಡಳಿಯ ಸದಸ್ಯ ಮೋಹನ್ ಕೆ. ಎಸ್., ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಿಶಾಂತ್, ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಅನುಷಾ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ವಸ್ಥಿಕ್ ಕೆ.ಆರ್. ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಲಿಖಿತಾ ವಿ.ಕೆ. ವಂದಿಸಿದರು. ವಿದ್ಯಾರ್ಥಿಗಳಾದ ಆಶಾದೇವಿ, ಮನಿಷಾ ಕಾರ್ಯಕ್ರಮ ನಿರೂಪಿಸಿದರು.
ಇತ್ತೀಚೆಗೆ ಸಾರಿಗೆ ಅಧಿಕಾರಿಯೊಬ್ಬರ ಭ್ರಷ್ಟಾಚಾರ ಪ್ರಕರಣವನ್ನು ಪರಿಶೀಲಿಸಿದಾಗ. ಅವರು ತಮಗೆ ಲಕ್ಷ ರೂ.ಗಳಷ್ಟು ಸರಕಾರದಿಂದ ಸಂಬಳವಿದ್ದರೂ, ಜನರಿಂದ ಹಣ ಪಡೆದುಕೊಳ್ಳುತ್ತಿರುವುದು ಅವರ ಹಣದ ಮೇಲಿನ ವ್ಯಾಮೋಹವನ್ನು ತೋರಿಸಿದೆ. ವಿಚಾರಣೆಗಾಗಿ ಅವರ ತುತ್ತಿನ ಬುತ್ತಿಯನ್ನು ಬಿಚ್ಚಿಟ್ಟಾಗ ಒಂದು ಚಪಾತಿ, ಬಾಳೆಹಣ್ಣು ಹಾಗೂ ಡಯಾಬಿಟಿಸ್ ಹಾಗೂ ರಕ್ತದೊತ್ತಡಕ್ಕೆ ಎರಡು ಮಾತ್ರೆಗಳಿದ್ದವು. ಲಕ್ಷಗಟ್ಟಲೆ ಹಣ ಸಂಪಾದಿಸುವುದರ ಹಿಂದೆ ಬಿದ್ದು ಆರೋಗ್ಯ ಅಥವಾ ಸಮಾಜದಲ್ಲಿ ಅವರ ಸ್ಥಾನ ಮಾನಕ್ಕೆ ಕುಂದು ತಂದುಕೊಳ್ಳುತ್ತೇವೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು ವಿಪರ್ಯಾಸ ಎಂದು ಯೋಗೀಶ್ ಕುಮಾರ್ ನಾಯ್ಕ್ ಹೇಳಿದರು.