Monday, November 25, 2024
ಸುದ್ದಿ

ಸ್ಯಾಂಡ್ ಬಜಾರ್ ಮೂಲಕ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮರಳು – ಕಹಳೆ ನ್ಯೂಸ್

ಬಂಟ್ವಾಳ: ಡ್ರಜ್ಜಿಂಗ್ ಮೂಲಕ ತುಂಬೆ ಡ್ಯಾಂ ಸಮೀಪದ ನೇತ್ರಾವತಿ ನದಿಯಿಂದ ಮೇಲೆತ್ತಲ್ಪಟ್ಟ ಮರಳನ್ನು ಆ್ಯಪ್ ಮೂಲಕ ಸಾರ್ವಜನಿಕರಿಗೆ ವಿತರಣಾ ಕಾರ್ಯ ಆರಂಭಗೊಂಡಿದೆ. ಇದೀಗ ತುಂಬೆ ಸಮೀಪದ ತಲಪಾಡಿ ಪ್ರದೇಶವು “ಸ್ಯಾಂಡ್ ಬಜಾರ್” ಆಗಿ ಮಾರ್ಪಟ್ಟಿದ್ದು, ಸ್ಯಾಂಡ್ ಬಜಾರ್ ಆ್ಯಪ್ ಬಳಸುವ ಮೂಲಕ ಸಾರ್ವಜನಿಕರು ನದಿ ತಟದಿಂದಲೇ ಕಡಿಮೆ ದರಲ್ಲಿ ಮರಳು ಪಡೆಯಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾಧಿಕಾರಿಯ ಅನುಮತಿಯ ಬಳಿಕ ತುಂಬೆ ವೆಂಟೆಡ್ ಡ್ಯಾಂನಿಂದ ಸುಮಾರು 500 ಮೀಟರ್ ದೂರದಲ್ಲಿ ತಲಪಾಡಿ ಬಳಿ ನದಿಯಿಂದ ಡ್ರಜ್ಜಿಂಗ್ ಮೂಲಕ ಹೂಳೆತ್ತುವ ಕಾರ್ಯಾರಂಭಗೊಂಡಿತ್ತು. ಇಲ್ಲಿಂದ ಮೇಲೆತ್ತಲ್ಪಟ್ಟ ಮರಳನ್ನು ಪಕ್ಕದ ವಿಶಾಲವಾದ 2 ಯಾರ್ಡ್‍ನಲ್ಲಿ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಿದ ಮರಳನ್ನು ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಕಡಿಮೆ ದರಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದ್ದು, ದಿನಾಲೂ ನೂರಾರು ಟಿಪ್ಪರ್, ಲಾರಿಗಳು ಈ ಪರಿಸರದಲ್ಲಿ ಓಡಾಟ ನಡೆಸುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾಧಿಕಾರಿಯ ಸೂಚನೆಯಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ದೆಹಲಿಯ ನೆಲ್ಕೊ ಕಂಪೆನಿ ಹೂಳೆತ್ತುವ ಗುತ್ತಿಗೆ ಪಡೆದಿದ್ದು, ಉಪಗುತ್ತಿಗೆಯನ್ನು ಮಂಗಳೂರಿನ ಖಾಸಗಿ ವ್ಯಕ್ತಿಗಳ ಕಂಪೆನಿಯೊಂದು ನೇತೃತ್ವ ವಹಿಸಿಕೊಂಡಿದೆ. ಸಾಕಷ್ಟು ಪ್ರಮಾಣದಲ್ಲಿ ಮರಳು ದೊರೆಯುತ್ತಿರುವುದರಿಂದ ಯಾವುದೇ ಅಕ್ರಮಗಳು ನಡೆಯದಂತೆ ಸಿಸಿ ಟಿವಿಯ ಕಣ್ಗಾವಲು ಹಾಕಲಾಗಿದೆ.

ಮಧ್ಯವರ್ತಿಗಳಿಲ್ಲದೆ ಮನೆ ಬಾಗಿಲಿಗೆ ಮರಳು:
ಜಿಲ್ಲೆಯ ಜನರಿಗೆ ಕಡಿಮೆ ದರದಲ್ಲಿ ಹಾಗೂ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಮನೆ ಬಾಗಿಲಿಗೆ ಮರಳು ತಲುಪಿಸುವ ಕಾರ್ಯ ಸ್ಯಾಂಡ್ ಬಜಾರ್ ಆಪ್ ಮಾಡಲಿದೆ. ಸ್ಯಾಂಡ್ ಬಜಾರ್ ಆಪ್ ಬಳಸುವ ಮೂಲಕ ಸಾರ್ವಜನಿಕರು, ತಮಗೆ ಸಮೀಪದ ಸ್ಥಳದಿಂದಲೇ ಮರಳು ಪಡೆಯಬಹುದಾಗಿದೆ. ಆನ್‍ಲೈನ್‍ನಲ್ಲಿ ಮರಳಿಗೆ ಸಂಬಂಧಪಟ್ಟ ದರ ವೀಕ್ಷಿಸಿ, ಆನ್‍ಲೈನ್ ಪಾವತಿ ಮಾಡಿದಲ್ಲಿ ಮನೆ ಬಾಗಿಲಿಗೆ ಮರಳು ತಲುಪಲಿದ್ದು, ಪ್ರತ್ಯೇಕ ವಾಹನ ಬಾಡಿಗೆ ಪಾವತಿಸುವ ಅಗತ್ಯವಿಲ್ಲ. ಅಲ್ಲದೇ, ತಾವು ಮರಳು ಬುಕ್ ಮಾಡಿದ ಅನಂತರ ಮರಳು ಲೋಡ್ ಆದ ಬಗ್ಗೆ ಯಾವ ವಾಹನದಲ್ಲಿ ಬರುತ್ತಿದೆ ಎನ್ನುವ ಬಗ್ಗೆ ಪ್ರತಿಯೊಂದು ಮಾಹಿತಿಯು ನಿಮ್ಮ ಮೊಬೈಲಿಗೆ ಬರಲಿದೆ. ಅತ್ಯಂತ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಯಲಿದೆ. ಮರಳು ಗುತ್ತಿಗೆದಾರರ ಮತ್ತು ಮರಳು ಸಾಗಾಟ ಮಾಡುವ ವಾಹನಗಳ ನೋಂದಣಿ ಸಹ ಆ್ಯಪ್‍ನಲ್ಲಿ ಸಿಗಲಿದೆ.

ಮನೆ ಅಥವಾ ಬಿಲ್ಡಿಂಗ್ ಕಾಮಗಾರಿಗೆ ಮರಳು ಬೇಕಾದಾಗ ಯಾರಲ್ಲಿ ವಿಚಾರಿಸಬೇಕು ಎಂಬ ಬಗ್ಗೆ ಗೊಂದಲ ಇನ್ನು ಮುಂದೆ ಅಗತ್ಯವಿಲ್ಲ. ಯಾಕೆಂದರೆ ತಮ್ಮಲ್ಲಿರುವ ಮೊಬೈಲ್‍ನಲ್ಲಿ ಸ್ಯಾಂಡ್ ಬಜಾರ್ ಎಂಬ ಆಪ್ ಡೌನ್‍ಲೋಡ್ ಮಾಡಿ ಅದರ ಮೂಲಕ ಮರಳು ಬುಕ್ಕಿಂಗ್ ಮಾಡಬಹುದಾಗಿದೆ.

ಮರಳು ಕಾದಿರಿಸುವುದು ಹೇಗೆ..?
ಮರಳು ಬೇಕಾದ ಗ್ರಾಹಕರು ಮೊಬೈಲ್‍ನಲ್ಲಿ ‘ಸ್ಯಾಂಡ್ ಬಜಾರ್’ ಆಪ್ ಡೌನ್ಲೋಡ್ ಮಾಡಬೇಕು. ಬಳಿಕ ಗ್ರಾಹಕರ ಮೊಬೈಲ್ ಸಂಖ್ಯೆ, ಸಂಪೂರ್ಣ ವಿಳಾಸ, ಮರಳು ಎಲ್ಲಿಗೆ ಪೂರೈಕೆ ಮಾಡಬೇಕು ಎಂಬ ವಿವರ ನಮೂದಿಸಬೇಕು. ಗ್ರಾಹಕನ ಆಧಾರ್ ನಂಬರ್ ನಮೂದಿಸಿ ಹತ್ತಿರವಿರುವ ಮರಳು ದಕ್ಕೆ ಸ್ಥಳವನ್ನು ಟೈಪ್ ಮಾಡಿ ಕಳುಹಿಸಬೇಕು. ಈ ಸಂದರ್ಭ ಒಟಿಪಿ ಸಂಖ್ಯೆ ಬರಲಿದ್ದು, ಆಪ್ ಮುಖೇನ ಮರಳು ಸಾಗಾಟದ ದರ ಸಂದೇಶ ಬರಲಿದೆ. ಈ ಮೊತ್ತವನ್ನು ಪೇಟಿಎಂ, ನೆಟ್‍ಬ್ಯಾಂಕಿಂಗ್ ಮುಖೇನ ಸಂದಾಯ ಮಾಡಬೇಕು. ಹಣ ಸಂದಾಯವಾದ ಕೂಡಲೇ ಮೊಬೈಲ್ ಸಂದೇಶ ಬರಲಿದ್ದು, ಅದನ್ನು ಸಂಬಂಧಪಟ್ಟ ಮರಳು ದಕ್ಕೆಯ ಗಮನಕ್ಕೆ ತರಬೇಕು. ಜೊತೆಗೆ ದಕ್ಕೆಗೆ ಕಂಟ್ರೋಲ್ ರೂಂನಿಂದ ಸಂದೇಶ ಹೋಗಲಿದೆ. ಇದರ ಆಧಾರದ ಮೇಲೆಯೇ ಮರಳು ಸಾಗಾಟ ನಡೆಯಲಿದೆ.

ಏನಿದು ‘ಸ್ಯಾಂಡ್ ಬಜಾರ್ ಆಪ್’..?
ಶೋರ್ ಟು ಎವ್ರಿ ಡೋರ್ (ನದಿ ದಡದಿಂದ ಮನೆ ಬಾಗಿಲಿಗೆ) ಎಂಬ ಸ್ಲೋಗನ್‍ನಲ್ಲಿ ‘ಸ್ಯಾಂಡ್ ಬಜಾರ್ ಆಪ್’ ತಯಾರಿಸಲಾಗಿದ್ದು, ಮರಳು ಸಾಗಾಟ ಸುಲಭವಾಗಿ ಗ್ರಾಹಕರಿಗೆ ತಲುಪಲು ಅನುಕೂಲವಾಗಲಿದೆ. ಜಿಲ್ಲಾಡಳಿತ ಮರಳಿಗೆ ದರ ನಿಗದಿ ಮಾಡಿ ಅದರ ಆಧಾರದಲ್ಲಿ ಪೂರೈಕೆ ಮಾಡಲಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ. ಇದರ ನಿರ್ವಹಣೆಯನ್ನು ಭೂವಿಜ್ಞಾನ ಮತ್ತು ಗಣಿ ಇಲಾಖೆ ಮಾಡಲಿದೆ.

ಮರಳು ಬುಕ್ಕಿಂಗ್ ನೋಂದಣಿಯಿಂದ ಹಿಡಿದು ಹಣಪಾವತಿ, ಮರಳು ಬುಕ್ಕಿಂಗ್, ವಾಹನ ಬುಕ್ಕಿಂಗ್, ಮರಳು ಲಾರಿ ಸಾಗಾಟವಾಗುವ ಟ್ರ್ಯಾಕಿಂಗ್ ಸ್ಟೇಟಸ್ ಹಂತಹಂತವಾಗಿ ಸ್ಯಾಂಡ್ ಬಜಾರ್ ಆಪ್‍ನಲ್ಲಿ ದೊರೆಯಲಿದ್ದು, ಇದು ಗ್ರಾಹಕರ ಮಾಹಿತಿಗೆ ಅನುಕೂಲವಾಗಲಿದೆ. ಜೊತೆಗೆ, ಬುಕ್ಕಿಂಗ್ ಮಾಹಿತಿ, ಗ್ರಾಹಕರ ಮಾಹಿತಿ, ‘ಗೂಗಲ್ ಮ್ಯಾಪ್ ವಿವ್’ ಮುಖೇನ ಮರಳು ಡಕ್ಕೆಯ ವಿವರವೂ ಸಿಗಲಿದೆ ಎಂದು ಆಪ್ ಡೆವಲಪ್‍ನ ಇಂಜಿನಿಯರ್ ನವಿನ್ ಅವರು ಮಾಹಿತಿ ನೀಡಿದ್ದಾರೆ.

6 ಸಾವಿರ ರೂ.ಗೆ ಮರಳು: ಡಿಸಿ ಶಶಿಕಾಂತ್ ಸೆಂಥಿಲ್
ದಕ್ಷಿಣ ಕನ್ನಡ ಜಿಲ್ಲೆಯ ಮರಳುಗಾರಿಕೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸುಲಭ ನಿರ್ವಹಣೆಗೆ ಸ್ಯಾಂಡ್ ಬಜಾರ್ ಆಪ್ ತಯಾರಿಸಲಾಗಿದೆ. ಯಾವುದೇ ಪ್ರಚಾರ ಮಾಡದೇ ‘ಸ್ಯಾಂಡ್ ಬಜಾರ್’ ಆಪ್‍ನ್ನು ಪ್ರಾಯೋಗಿಕವಾಗಿ ಲೋಕಾರ್ಪಣೆ ಮಾಡಲಾಗಿದೆ. ಲೀಜ್‍ದಾರರು, ಟ್ರಾನ್ಸ್ ಪೋರ್ಟ್ ಹಾಗೂ ನಾಗರಿಕರು ಹೀಗೆ ಮೂರು ವಿಭಾಗದಲ್ಲಿ ಆಪ್ ಕಾರ್ಯ ನಿರ್ವಹಿಸಲಿದೆ. ತನ್ನ ಅಧೀನದಲ್ಲಿರುವ ಭೂವಿಜ್ಞಾನ ಮತ್ತು ಗಣಿ ಇಲಾಖೆಯು ಇದರ ನಿರ್ವಹಣೆ ಮಾಡುತ್ತಿದೆ. ನಾಗರಿಕರು ಎಲ್ಲಿಂದ ಬೇಕಾದರೂ ಆರ್ಡರ್ ಮಾಡಿದರೂ ಅವರ ಮನೆಬಾಗಿಲಿಗೆ ಮರಳು ಬಂದು ಬೀಳುತ್ತದೆ. ಒಂದು ಟನ್ ಮರಳಿಗೆ 480 ರೂ. ಬೆಲೆ ನಿಗಧಿಪಡಿಸಲಾಗಿದೆ. 10 ಟನ್‍ಗೆ 4 ಸಾವಿರ ರೂ. ಮತ್ತು ಸಾಗಾಟ ವೆಚ್ಚ 2 ಸಾವಿರ ರೂ. ಸೇರಿ ಒಟ್ಟು 6 ಸಾವಿರ ರೂ. ವೆಚ್ಚದಲ್ಲಿ ಮರಳು ಸಿಗಲಿದೆ. ಬುಕ್ಕಿಂಗ್‍ನಿಂದ ನೆಟ್ ಬ್ಯಾಂಕಿಂಗ್ ಎಲ್ಲವೂ ಆನ್‍ಲೈನ್ ಮೂಲಕ ಪಾರದರ್ಶಕತೆಯಿಂದ ನಡೆಯುತ್ತವೆ. ಇದೀಗ ತಲಪಾಡಿ ಡಕ್ಕೆಯಲ್ಲಿ ಮಾತ್ರ ಮರಳು ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಇತರ ಕಡೆಗಳಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.