ಬೆಂಗಳೂರು: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಇಂದು ತಮ್ಮ ಕಚೇರಿಯಲ್ಲಿ ರಾಜೀನಾಮೆ ನೀಡಿದ ಶಾಸಕರಿಂದ ವಿವರಣೆ ಪಡೆದುಕೊಂಡಿದ್ದಾರೆ.
ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಜೀವನದಲ್ಲಿ ಇದು ವಿಶಿಷ್ಟ ಸನ್ನಿವೇಶವಾಗಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುವುದು ನನ್ನ ಕರ್ತವ್ಯ. ಯಾರನ್ನು ಉಳಿಸುವುದು ಅಥವಾ ಕಳಿಸುವುದು ನನ್ನ ಕೆಲಸವಲ್ಲ. ಕೆಲವು ವರದಿಗಳನ್ನು ನೋಡಿ ನನಗೆ ಬೇಸರವಾಗಿದೆ. ನಾನು ರಾಜೀನಾಮೆ ಅಂಗೀಕರಿಸಲು ತಡ ಮಾಡಿದ್ದಕ್ಕೆ ಶಾಸಕರು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ ಎಂದು ವರದಿಯಾಗಿದೆ. ನಾನು ವಿಳಂಬ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಶಾಸಕರ ಆಗಮನದ ಬಗ್ಗೆ ನನಗೆ ಮಾಹಿತಿ ನೀಡಿರಲಿಲ್ಲ. ಮಂಗಳವಾರ ಕಚೇರಿಗೆ ಬಂದು ರಾಜೀನಾಮೆ ಪತ್ರಗಳನ್ನು ಪರಿಶೀಲನೆ ನಡೆಸಿದೆ. ರಾಜೀನಾಮೆ ನೀಡಿರುವ ಬಗ್ಗೆ ವಿಚಾರಣೆ ಮಾಡಿ ಅಂಗೀಕರಿಸಬೇಕಾದ ಹೊಣೆ ನನ್ನ ಮೇಲಿದೆ. ಯಾರಿಗೆ ಸಮಯ ಕೊಡಬೇಕಿತ್ತೊ ಅವರಿಗೆ ಬರಲು ಸಮಯ ಕೊಟ್ಟಿದ್ದೇನೆ. ಜುಲೈ 13, 14 ರಜೆ ಇದ್ದು 15 ರಿಂದ ಮತ್ತೆ ವಿಚಾರಣೆ ನಡೆಯಲಿದೆ. ನಾನು ವಿಳಂಬ ಮಾಡಿಲ್ಲ. ಲೈಟ್ನಿಂಗ್ ಸ್ಪೀಡ್ ನಲ್ಲಿ ಇದನ್ನು ಮಾಡಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
ಯಾರಿಗಾಗಿಯೂ ನಾನು ಕೆಲಸ ಮಾಡಿಲ್ಲ. ಏನು ಮಾಡಬೇಕೋ ಅದನ್ನು ಮಾಡಬೇಕು. ಕೆಲವರು ಹೇಳಿದಂತೆ ನಾವು ಕುಣಿಯಬೇಕಾ? ನಾವು ರಾಜ್ಯದ ಜನರ ಹಂಗಿನಲ್ಲಿ ಬದುಕುತ್ತಿದ್ದೇವೆ. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತೇವೆ. ಯಾರಿಗೋ ನಿಧಾನಗತಿ ಆಗುತ್ತಿದೆ, ರಾಜೀನಾಮೆ ಅಂಗೀಕರಿಸಿಲ್ಲ ಎಂಬ ಗೊಂದಲವಿದೆ. ನನ್ನ ಭೇಟಿಗೆ ಸುಪ್ರೀಂ ಕೋರ್ಟ್ ಅನುಮತಿ ಬೇಕಾ? ಅವರು ಬಂದು ರಾಜೀನಾಮೆ ಕೊಟ್ಟು ಮುಂಬೈಗೆ ಸುಪ್ರೀಂ ಕೋರ್ಟ್ ಗೆ ಹೋಗಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ.
ಸ್ವಯಂ ಪ್ರೇರಿತವಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆಯೇ ಎಂದು ಪರಿಶೀಲನೆ ನಡೆಸಿ ವಿಚಾರಣೆ ಮಾಡಿ ನಾನು ತೀರ್ಮಾನ ಕೈಗೊಳ್ಳಬೇಕಿತ್ತು. ಹೀಗೆ ಮಾಡದಿದ್ದರೆ ನಾನು ತಪ್ಪು ಮಾಡಿದಂತೆ ಆಗುತ್ತದೆ. ಯಾವ ಶಕ್ತಿಗೂ ನಾನು ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.