ಕಬಕ: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಅಳಕೆಮಜಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಷಾಢ (ಆಟಿ) ತಿಂಗಳ ಬಿಸಿಯೂಟಕ್ಕೆ ವಿದ್ಯಾರ್ಥಿಗಳ ಹೆತ್ತವರು ‘ಉಪ್ಪಡ್ ಪಚ್ಚಿಲ್’ (ಉಪ್ಪಲ್ಲಿ ಹಾಕಿದ ಹಲಸು) ಒದಗಿಸಿದ್ದಾರೆ.
ಇಲ್ಲಿನ 89 ವಿದ್ಯಾರ್ಥಿಗಳ ಹೆತ್ತವರು ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಸಹಯೋಗ ನೀಡುತ್ತಿದ್ದಾರೆ. ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಎಲ್ಲ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಾರೆ. ಹೀಗಾಗಿ, ಶಾಲೆಯ ಕಾರ್ಯಕ್ರಮ ಊರಿನ ಹಬ್ಬದಂತಾಗುತ್ತದೆ. ಎಲ್ಲ ಸಿದ್ಧತೆಗಳನ್ನು ಸ್ಥಳೀಯರೇ ಮಾಡುತ್ತಾರೆ.
ಮನೆಯಲ್ಲಿ ವಿಶೇಷ ಆಹಾರ ತಯಾರಿಸಿದರೆ ಅದನ್ನು ಹೆತ್ತವರು ಶಾಲೆಗೆ ತಂದು ಮಕ್ಕಳಿಗೆ ಬಡಿಸುತ್ತಾರೆ. ಹೀಗಾಗಿ, ಇಲ್ಲಿ ಪಾಯಸ ಇತ್ಯಾದಿಗಳಿರುವ ವಿಶೇಷ ಊಟವೇ ಜಾಸ್ತಿ. ಕೆಲವು ಹೆತ್ತವರು ತರಕಾರಿ, ತೆಂಗಿನಕಾಯಿ, ಬಾಳೆಹಣ್ಣು ಇತ್ಯಾದಿಗಳನ್ನು ಶಾಲೆಗೆ ಒದಗಿಸುತ್ತಾರೆ. ಹಾಗಂತ, ಇಲ್ಲಿನ ವಿದ್ಯಾರ್ಥಿಗಳ ಹೆತ್ತವರೇನೂ ಆರ್ಥಿಕವಾಗಿ ಶ್ರೀಮಂತರಲ್ಲ. ಶಾಲೆಯ ಕುರಿತಾಗಿ ಅವರ ಪ್ರೀತಿಯೇ ಅವರ ಶ್ರೀಮಂತಿಕೆ.
ಈ ಬಾರಿ ವಿದ್ಯಾರ್ಥಿಗಳ ಹೆತ್ತವರು ಹಲಸಿನ ಸೋಳೆ ತೆಗೆದು, ಡ್ರಮ್‍ಗಳಲ್ಲಿ ತುಂಬಿಸಿ ಉಪ್ಪು ಹಾಕಿ ಇಟ್ಟಿದ್ದಾರೆ. ಹಲಸಿನ ಬೀಜಗಳಲ್ಲಿಯೂ ಸಾಕಷ್ಟು ಪೌಷ್ಟಿಕಾಂಶವಿದ್ದು, ನಿತ್ಯ ಬಿಸಿಯೂಟದ ಸಾಂಬಾರ್ ನಲ್ಲಿ ಬೆರಕೆ ಮಾಡಲಾಗುತ್ತಿದೆ. ಆಟಿ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜತೆಗೆ ‘ಉಪ್ಪಡ್ ಪಚ್ಚಿಲ್’ ಖಾದ್ಯವೂ ದೊರೆಯಲಿದೆ.