ಸುಬ್ರಹ್ಮಣ್ಯ : ಪಂಜ ಸಮೀಪದ ಕೃಷ್ಣ ನಗರ ಎಂಬಲ್ಲಿ, ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಸುಬ್ರಹ್ಮಣ್ಯ ಕೆಎಸ್‍ಎಸ್ ಕಾಲೇಜು ದ್ವಿತಿಯ ದರ್ಜೆ ಗುಮಾಸ್ತ ಶೀನಪ್ಪ ರೈ (52) ಮೃತಪಟ್ಟಿದ್ದಾರೆ. ಮ್ರತರು ಸುಬ್ರಹ್ಮಣ್ಯ ದೇವರಗದ್ದೆ ಶಂಭು ಶೆಟ್ಟಿ ಅವರ ಪುತ್ರರಾಗಿದ್ದು ಸುಳ್ಯದಲ್ಲಿ ನೆಲೆಸಿದ್ದರು. ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ, ಕೆಎಸ್‍ಎಸ್ ಕಾಲೇಜಿನಲ್ಲಿ 28 ವರ್ಷಗಳಿಂದ ಕರ್ತವ್ಯ ನಿರ್ವಹಿಸುತಿದ್ದರು.
ಪ್ರತಿನಿತ್ಯ ಗುತ್ತಿಗಾರು ಮಾರ್ಗವಾಗಿ ಸುಳ್ಯಕ್ಕೆ ತೆರಳುತಿದ್ದ ಶೀನಪ್ಪ ರೈಯವರು, ನಿನ್ನೆ ಪಂಜದಲ್ಲಿ ಖಾಸಗಿ ಕೆಲಸ ಇದ್ದ ಕಾರಣ ಪಂಜ ಮಾರ್ಗವಾಗಿ ತೆರಳಿದ್ದರು. ಪಂಜ ಪೇಟೆಯಿಂದ ಮುಂದಕ್ಕೆ ಕೃಷ್ಣ ನಗರ ಬಳಿ ತಲುಪಿದಾಗ, ಎದುರಿನಿಂದ ಬಂದ ಬಸ್ ಮತ್ತು ಬೈಕ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಶೀನಪ್ಪ ರೈ ಅವರು ರಸ್ತೆಗೆ ಎಸೆಯಲ್ಪಟ್ಟು, ಗಂಭೀರ ಗಾಯಗೊಂಡಿದ್ದರು. ತಕ್ಷಣ ಸ್ಥಳಿಯರು ಪಂಜ ಕ್ಲಿನಿಕ್‍ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮಂಗಳೂರು ಖಾಸಗಿ ಆಸ್ಪತ್ರೆಯ ವೈದ್ಯರು ದೃಢ ಪಡಿಸಿದ ಬಳಿಕ, ಮೃತ ದೇಹವನ್ನು ಮಹಜರಿಗಾಗಿ ಸುಳ್ಯ ಕೆವಿಜಿ ಆಸ್ಪತ್ರೆಗೆ ರವಾನಿಸಲಾಗಿದೆ. ನಾಳೆ ತನಕ ಶವವನ್ನು ಅಲ್ಲೆ ಇರಿಸಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸಂಬಂಧಿಕರು ನಿರ್ಧರಿಸಿದ್ದಾರೆ. ಮೃತರು, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಘಟನೆ ಸಂಬಂಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.