ಬೆಂಗಳೂರು: ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಸಿಎಂ ಅವರು ಬೇಸರವೇನು ಮಾಡಿಕೊಂಡಿಲ್ಲ. ಅವರು ಆರಾಮವಾಗಿದ್ದಾರೆ. ನಮ್ಮ ಪಕ್ಷದವರು ವಾಪಸ್ ಬರುವ ನಿರೀಕ್ಷೆ ಇದೆ ಎಂದು ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ. ಸೋಮವಾರಕ್ಕೆ ಸದನವನ್ನು ಮುಂದೂಡಲಾಗಿದೆ. ಶಾಸಕರ ರಾಜೀನಾಮೆಯಿಂದ ಸಿಎಂ ಅವರು ಬೇಸರ ಏನು ಮಾಡಿಕೊಂಡಿಲ್ಲ. ಅವರು ಆರಾಮಾಗಿದ್ದಾರೆ. ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯವಾಗಿದ್ದು, ನಾವು 30 ವರ್ಷದಿಂದ ರಾಜಕೀಯದಲ್ಲಿ ಇದೆಲ್ಲವನ್ನು ನೋಡಿಕೊಂಡು ಬಂದಿದ್ದೇವೆ. ಶಾಸಕರು ಪಕ್ಷಕ್ಕೆ ನಿಷ್ಠೆಯಿಂದ ಇರಬೇಕಿತ್ತು. ಇದರಿಂದ ನಿಜ ಬೇಸರ ಆಗುತ್ತೆ. ಆದರೆ ಸಿಎಂ ಏನು ಬೇಸರ ಮಾಡಿಕೊಂಡು ಕುಳಿತಿಲ್ಲ. ಆದರೆ ನಮ್ಮ ಪಕ್ಷದವರು ವಾಪಸ್ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.
ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಸ್ಪೀಕರ್ ಅವರು ಇನ್ನೂ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಅವರು ಶಾಸಕರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅವರ ಜೊತೆ ಮಾತನಾಡಬೇಕು. ಅವರ ಮಾತಿನಿಂದ ನನಗೆ ಮನವರಿಕೆ ಆಗಬೇಕು. ಆಗ ಮಾತ್ರ ರಾಜೀನಾಮೆ ಸ್ವೀಕರಿಸುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ. ಹಾಗಾಗಿ ರಾಜೀನಾಮೆ ಕೊಟ್ಟಿರುವುದೇ ಪ್ರಜಾಪ್ರಭುತ್ವಕ್ಕೆ ಒಂದು ಮಾರಕವಾಗಿದೆ. ಮನಸ್ಸು ಬದಲಾಯಿಸಿಕೊಂಡು ಬರುವ ಅವಕಾಶವಿದೆ. ಸದ್ಯಕ್ಕೆ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
ರಾಜಕಾರಣಿಗಳ ಇಂದಿನ ನಡೆಯಿಂದ ರಾಜ್ಯದ ಜನತೆಗೆ ಅವರ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಗೆದ್ದ ಮೇಲೆ ಜನರ ಸೇವೆ ಮಾಡಬೇಕು. ಕ್ಷೇತ್ರದ ಜನರಿಗೆ ಸಿಗುವ ರೀತಿ ಇರಬೇಕು ಎಂಬ ಭಾವನೆ ಶಾಸಕರಲ್ಲಿಯೂ ಇರಬೇಕು. ಆದರೆ ಗೆದ್ದ ಮೇಲೆ ಅಧಿಕಾರ ಮತ್ತು ಹಣಕ್ಕಾಗಿ ಪಕ್ಷಕ್ಕೂ, ಹೈಕಮಾಂಡ್‍ಗೂ ನಿಷ್ಠೆ ತೋರಿಸದೆ ಈ ರೀತಿ ಪಾರ್ಟಿ ಬಿಟ್ಟು ಪಾರ್ಟಿ ಬಿಟ್ಟು ಜಿಗಿಯುವುದು ತಪ್ಪು. ಶಾಸಕರು ಏನೇ ಕಾರಣ ಕೊಟ್ಟರು ಪರಿಹಾರ ಮಾಡದಂತಹ ಸಮಸ್ಯೆ ಏನು ಇರಲಿಲ್ಲ. ಪಕ್ಷ, ರಾಜಕೀಯ ಎಂದರೆ ಸಣ್ಣ-ಪುಟ್ಟ ಸಮಸ್ಯೆ ಇರುತ್ತವೆ. ಅದನ್ನು ಕೂತು ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ಮಾಡಬಾರದು ಎಂದು ಅನಿತಾ ಅವರು ಹೇಳಿದರು.