ನವದೆಹಲಿ: ಭಾರತ ಕ್ರಿಕೆಟ್ ತಂಡದ ಯಶಸ್ವಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾಕ್ಷೇತ್ರದಿಂದ ನಿವೃತ್ತರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ನಡುವೆಯೇ ನಿವೃತ್ತಿ ನಂತರ ಅವರು ಬಿಜೆಪಿ ಸೇರಿ, ರಾಜಕೀಯ ರಂಗದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಮತ್ತು ಆಕ್ರಮಣಕಾರಿ ಬ್ಯಾಟ್ಸ್‍ಮೆನ್ ಆಗಿರುವ ಧೋನಿ ನಿವೃತ್ತರಾದ ಬಳಿಕ ಬಿಜೆಪಿ ಸೇರಲಿದ್ದಾರೆಂದು ಕೇಂದ್ರ ಮಾಜಿ ಸಚಿವ ಮತ್ತು ಪಕ್ಷದ ಮುಖಂಡ ಸಂಜಯ್ ಪಾಸ್ವಾನ್ ಅವರು ಹೇಳಿದ್ದಾರೆ.
ಧೋನಿಯವರು ರಾಜಕೀಯ ಸೇರಲಿದ್ದಾರೆ ಎಂಬ ಮಾತುಗಳು ಕೆಲಕಾಲದಿಂದ ಚಾಲ್ತಿಯಲ್ಲಿದೆ. ಅವರು ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಬಿಜೆಪಿಗೆ ಸೇರುತ್ತಾರೆ. ರಾಜಕೀಯ ರಂಗದ ಎರಡನೇ ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಸುದ್ದಿಯಿದೆ.
ಧೋನಿ ಬಿಜೆಪಿ ಸೇರುವುದು ಖಚಿತವು ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಪಾಸ್ವಾನ್ ಬಹು ಹಿಂದಿನಿಂದಲೂ ಈ ಬಗ್ಗೆ ತಮ್ಮ ಪಕ್ಷದ ನಾಯಕರು ಒಲವು ಹೊಂದಿದ್ದಾರೆ. ಆದರೆ ಅವರು ಕ್ರಿಕೆಟ್ ರಂಗದಲ್ಲಿ ಮಿಂಚುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರ ಮಹತ್ವ ಪಡೆದುಕೊಂಡಿರಲಿಲ್ಲ. ಧೋನಿ ತಮ್ಮ ನಿವೃತ್ತಿ ಘೋಷಿಸಿದ ನಂತರ ಬಿಜೆಪಿ ನಾಯಕರು ಅವರನ್ನು ಸಂಪರ್ಕಿಸಿ ತಮ್ಮ ಪಕ್ಷಕ್ಕೆ ಆಮಂತ್ರಣ ನೀಡಿದ್ದಾರೆ. ಅವರು ಬಿಜೆಪಿ ಸೇರುವುದು ಬಹುತೇಕ ಖಚಿತ ಎಂಬ ಮಾಹಿತಿಯಿದೆ.
ವಿಶ್ವ ಕಪ್ ಕ್ರಿಕೆಟ್‍ನ ಸೆಮಿಫೈನಲ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಧೋನಿ ನಿವೃತ್ತರಾಗುವುದು ಬೇಡ. ಅವರು ಮತ್ತಷ್ಟು ಕಾಲ ಕ್ರಿಕೆಟ್ ರಂಗದಲ್ಲೇ ಮುಂದುವರೆಯಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಒಂದೆಡೆ ಒತ್ತಡ ಹೇರುತ್ತಿದ್ದಾರೆ.
ಆದರೆ ವಿಶ್ವ ಕಪ್‍ನ ಉಪಾಂತ್ಯದಲ್ಲಿ ಭಾರತಕ್ಕೆ ಸೋಲುಂಟಾಗಿರುವುದರಿಂದ ಧೋನಿ ತಮ್ಮ ನಿವೃತ್ತಿಯನ್ನು ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಅವರು, ರಾಜಕೀಯದಲ್ಲಿ ತಮ್ಮ ಜೀವನ ಕಳೆಯುವ ಉದ್ದೇಶವನ್ನು ಹೊಂದಿದ್ದಾರೆಂದು ಹೇಳಲಾಗುತ್ತಿದೆ.