ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ವಿಶ್ವಾಸಮತ ಗೆಲ್ಲುವ ಸಂಪೂರ್ಣ ವಿಶ್ವಾಸದಲ್ಲಿ ನಾವಿದ್ದೇವೆ. ಸ್ಪೀಕರ್ ದಿನ ನಿಗಧಿ ಮಾಡಿದ ಮೇಲೆ ನೋಡೋಣ ಏನಾಗುತ್ತದೆ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಜಿಟಿಡಿ ಉತ್ತರಿಸಿದ್ದಾರೆ.
ಅತೃಪ್ತರನ್ನು ಮನವೊಲಿಸುವ ಕಾರ್ಯ ಇಂದಿಗೂ ನಿರಂತರವಾಗಿ ನಡೆಯುತ್ತಿದೆ. ಆಪರೇಷನ್ ಮಾಡಲು ಇನ್ನು ಮುಂದೆ ಮುಂಬೈಗೆ ಹೋಗಬೇಕಾಗಿಲ್ಲ, ಬೆಂಗಳೂರಲ್ಲೇ ನಡೆಯುತ್ತದೆ ಎಂದು ಸಚಿವ ಜಿ ಟಿ ದೇವೇಗೌಡ ಹೇಳಿದ್ದಾರೆ.
ಬಿಜೆಪಿಯವರಿಗೆ ತಮ್ಮ ಶಾಸಕರ ಮೇಲೆ ನಂಬಿಕೆಯಿಲ್ಲ, ಅದಕ್ಕೆ ಅವರನ್ನು ರೆಸಾರ್ಟಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಮಗೆ ವಿಶ್ವಾಸ ಇರುವುದರಿಂದಲೇ, ಅವಿಶ್ವಾಸ ಮಂಡಣೆಗೆ ಮುಂದಾಗಿರುವುದು ಎಂದು ಸಿದ್ದರಾಮಯ್ಯ ಕೂಡಾ ಹೇಳಿಕೆ ನೀಡಿದ್ದಾರೆ. ಸಚಿವ ಸಾ.ರಾ.ಮಹೇಶ್ ಬಿಜೆಪಿ ನಾಯಕರನ್ನು ಭೇಟಿ ಮಾಡಿರುವ ಬಗ್ಗೆ ಹೆಚ್ಚಿನ ಮಾಹಿತಿ ನನಗಿಲ್ಲ. ಬಿಜೆಪಿ ಜತೆ ಕೈಜೋಡಿಸಿ ಸರಕಾರ ರಚಿಸುವ ಪ್ರಶ್ನೆಯೇ ಇಲ್ಲ. ಆ ರೀತಿಯ ಯಾವ ಮಾತುಕತೆಗಳೂ ನಡೆದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.