ಮುಂಬೈ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹತ್ತು ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಅವರಿಗೆ ಸಾಧ್ಯವಿಲ್ಲ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ತಿಳಿಸಿದ್ದಾರೆ.
ಮುಂಬೈನ ಹೋಟೆಲ್‍ನಲ್ಲಿ ತಂಗಿರುವ ಅತೃಪ್ತ ಶಾಸಕರಿಗೆ, ಮುಕುಲ್ ರೋಹಟಗಿ ಅವರು ಈ ವಿಷಯದ ಕುರಿತು ಪತ್ರ ಬರೆದಿದ್ದಾರೆ. ಸ್ಪೀಕರ್ ಅವರು ಈಗಿನ ಸಂದರ್ಭದಲ್ಲಿ 10 ಮಂದಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದ ಅನರ್ಹತೆ ವಿಚಾರವಾಗಿ ಗೊಂದಲದಲ್ಲಿದ್ದ, ಅತೃಪ್ತ ಶಾಸಕರು ಸ್ವಲ್ಪ ನಿರಾಳರಾಗಿದ್ದಾರೆ ಎಂದು ಹೇಳಲಾಗಿದೆ. ಕೋರ್ಟ್ ಆದೇಶ ನಿರ್ಧಿಷ್ಟ ಅನರ್ಹತೆ ದೂರಿಗೆ ಸೀಮಿತವಾಗಿಲ್ಲ. ವಿಪ್ ಜಾರಿಗೊಳಿಸಿರುವ ಆಧಾರದಲ್ಲಿ ಅನರ್ಹತೆ ಸಾಧ್ಯವಿಲ್ಲ. ಜುಲೈ 11ರಂದು ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಲಾಗಿತ್ತು. ಇದಕ್ಕೂ ಮುಂಚೆ ಅವರು ರಾಜೀನಾಮೆ ನೀಡಿರುವುದರಿಂದ ಈ ಶಾಸಕರ ಮೇಲೆ ವಿಪ್ ಜಾರಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಎರಡೂ ಪಕ್ಷಗಳ ಶಾಸಕರು ವಿಪ್ ಜಾರಿಗೊಳ್ಳುವ ಮೊದಲೇ ರಾಜೀನಾಮೆ ನೀಡಿದ್ದಾರೆ. ಹಾಗೆಯೇ ತಮ್ಮ ರಾಜೀನಾಮೆ ಅಂಗಿಕಾರ ಮಾಡುವುದಕ್ಕೆ ಸಭಾಧ್ಯಕ್ಷರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದಾರೆ. ಈ ಕಾರಣದಿಂದ ಅವರ ಅನರ್ಹತೆ ಸಾಧ್ಯವಿಲ್ಲ ಎಂದು ಮುಕುಲ್ ರೋಹಟಗಿ ತಿಳಿಸಿದ್ದಾರೆ.