ನವದೆಹಲಿ: ಮನೆ ಅಥವಾ ಕಾರು ಖರೀದಿ, ವಿದೇಶ ಪ್ರಯಾಣ ಅಥವಾ ಹೂಡಿಕೆಯಂತಹ ಭಾರಿ ಮೊತ್ತದ ಹಣಕಾಸು ವ್ಯವಹಾರ ನಡೆಸುವವರು ಪ್ಯಾನ್ ಬದಲಿಗೆ ಆಧಾರ್ ಸಂಖ್ಯೆ ಕೊಟ್ಟರೆ ಸಾಕು ಎಂದು ಬಜೆಟ್‌ನಲ್ಲಿ ಘೋಷಿಸಿದ್ದ ಕೇಂದ್ರ ಸರ್ಕಾರ ಅದಕ್ಕೆ ಈಗ ಒಂದು ಷರತ್ತು ವಿಧಿಸಲು ಹೊರಟಿದೆ. ಈ ರೀತಿ ನೀಡಲಾಗುವ ಆಧಾರ್ ಸಂಖ್ಯೆ ಸರಿಯಾಗಿರಬೇಕು. ತಪ್ಪಾಗಿದ್ದರೆ, ಅದನ್ನು ನೀಡಿದವರು ಹಾಗೂ ದೃಢೀಕರಿಸಿದವರಿಗೆ ಪ್ರತಿ ಬಾರಿಯೂ ತಲಾ 10 ಸಾವಿರ ರು. ದಂಡ ಹೇರಲು ಮುಂದಾಗಿದೆ.
ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿದ ನಂತರ ಅಂದರೆ 2019ರ ಸೆ.1ರಿಂದ ಹೊಸ ನಿಯಮ ಜಾರಿಗೆ ಬರುವ ನಿರೀಕ್ಷೆ ಇದೆ. ಈ ರೀತಿ ದಂಡ ಆದೇಶ ಜಾರಿಗೂ ಮುನ್ನ ಸಂಬಂಧಿಸಿದ ವ್ಯಕ್ತಿಗಳಿಗೂ ಅಭಿಪ್ರಾಯ ಹೇಳಲು ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ಯಾಂಕ್ ಖಾತೆ ತೆರೆಯಲು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅರ್ಜಿ ಸಲ್ಲಿಕೆ ವೇಳೆ, ಡಿಮ್ಯಾಟ್ ಖಾತೆ ಆರಂಭಿಸಲು, 50 ಸಾವಿರ ರು. ಮೇಲ್ಪಟ್ಟ ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್ ಪಾವತಿ ವೇಳೆ, 2 ಲಕ್ಷ ರು. ಮೇಲ್ಪಟ್ಟಸರಕು ಅಥವಾ ಸೇವೆಯನ್ನು ಪಡೆಯುವಾಗ ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯ. ಆದರೆ ಪ್ಯಾನ್ ಹೊಂದಿರುವವರಿಗಿಂತ ಆಧಾರ್ ಸಂಖ್ಯೆ ಹೊಂದಿರುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ಯಾನ್ ಸಂಖ್ಯೆ ಬದಲಿಗೆ ಆಧಾರ್ ಸಂಖ್ಯೆ ನಮೂದಿಸುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಪ್ಯಾನ್ ಸಂಖ್ಯೆ ತಪ್ಪಾಗಿ ನಮೂದಿಸಿದರೆ ದಂಡ ವಿಧಿಸುವ ನಿಯಮವಿದ್ದು, ಅದನ್ನೇ ಆಧಾರ್‌ಗೂ ವಿಸ್ತರಿಸಲಾಗುತ್ತಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.