Tuesday, January 21, 2025
ಸುದ್ದಿ

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ 24 ಮಂದಿ ಪೈಕಿ ಬರೋಬ್ಬರಿ 19 ಮಂದಿ ಕಣ್ಣೇ ಕಳೆದುಕೊಂಡರು – ಕಹಳೆ ನ್ಯೂಸ್

ಬೆಂಗಳೂರು :  ಕಣ್ಣಿನ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಸರ್ಕಾರಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಜು.9ರಂದು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ 24 ಮಂದಿ ಪೈಕಿ ಬರೋಬ್ಬರಿ 19 ಮಂದಿ ದೃಷ್ಟಿಕಳೆದುಕೊಳ್ಳುವ ಭೀತಿಗೆ ಎದುರಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿ ಆರು ದಿನ ಕಳೆದರೂ 19 ಮಂದಿಗೆ ದೃಷ್ಟಿಬಂದಿಲ್ಲ. ಅಲ್ಲದೆ, ಅವರಿಗೆ ದೃಷ್ಟಿಬರುವ ಬಗ್ಗೆ ಆಸ್ಪತ್ರೆಯು ಭರವಸೆಯನ್ನೂ ನೀಡಿಲ್ಲ.

ಹೀಗಾಗಿ, ಜು.9ರಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ, ಶಸ್ತ್ರಚಿಕಿತ್ಸೆ ನಡೆಯುವಾಗ ಆಸ್ಪತ್ರೆಯ ಉಸ್ತುವಾರಿ ಹೊತ್ತಿದ್ದವರ ವಿರುದ್ಧ ಪೊಲೀಸ್‌ ದೂರು ನೀಡಲು ರೋಗಿಗಳ ಸಂಬಂಧಿಕರು ನಿರ್ಧರಿಸಿದ್ದಾರೆ. ಅಲ್ಲದೆ, ಇಂಡಿಯನ್‌ ಮೆಡಿಕಲ್‌ ಕೌನ್ಸಿಲ್‌, ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರು ನೀಡಲು ಮುಂದಾಗಿದ್ದು, ಸೋಮವಾರ ಬೆಳಗ್ಗೆ ಮಿಂಟೋ ಆಸ್ಪತ್ರೆ ಎದುರು ಬೃಹತ್‌ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜು.9ರಂದು ಶಸ್ತ್ರಚಿಕಿತ್ಸೆಗೆ ಒಳಗಾದ 24 ಮಂದಿಗೂ ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಂದ ಉಂಟಾಗಿರುವ ಲೋಪದಿಂದಾಗಿ ತೀವ್ರ ಕಣ್ಣಿನ ಸಮಸ್ಯೆ ಉಂಟಾಗಿದೆ. ಕಳೆದ ಆರು ದಿನಗಳಿಂದ ಶಸ್ತ್ರಚಿಕಿತ್ಸೆಯಿಂದ ಉಂಟಾಗಿರುವ ಸಮಸ್ಯೆ ನಿವಾರಿಸಲು ಆಸ್ಪತ್ರೆ ವೈದ್ಯರು ತೀವ್ರ ಕಸರತ್ತು ನಡೆಸುತ್ತಿದ್ದು, ಇದರ ಪರಿಣಾಮ ಈವರೆಗೆ ಐದು ಮಂದಿಗೆ ಮಾತ್ರ ಕಣ್ಣಿನ ದೃಷ್ಟಿಬಂದಿದೆ. ಡ್ರಗ್ಸ್‌ ರಿಯಾಕ್ಷನ್‌ನಿಂದ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಅವರಿಗೆ ದೃಷ್ಟಿಮರುಕಳಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದು, ದೃಷ್ಟಿಬರುವ ಬಗ್ಗೆ ಯಾವುದೇ ಭರವಸೆಯನ್ನೂ ಆಸ್ಪತ್ರೆ ವೈದ್ಯರು ನೀಡದಿರುವುದು ರೋಗಿಗಳಿಗೆ ತೀವ್ರ ಆತಂಕ ಸೃಷ್ಟಿಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಧತ್ವ ಭೀತಿಯಲ್ಲಿ ರೋಗಿಗಳ ನರಳಾಟ:

ಕಣ್ಣಿಗೆ ಪೊರೆ ಉಂಟಾಗಿ ದೃಷ್ಟಿಮಂದವಾಗಿದ್ದ ರೋಗಿಗಳು ಸ್ಪಷ್ಟದೃಷ್ಟಿಯ ಆಸೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ, ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಶಾಶ್ವತವಾಗಿ ಅಂಧರಾಗಿದ್ದು, ಅಂಧತ್ವ ನಿವಾರಣೆಯಾಗುವ ಭರವಸೆ ಇಲ್ಲದೆ ನರಳಾಡುತ್ತಿದ್ದಾರೆ. ಅಲ್ಲದೆ ಶಸ್ತ್ರಚಿಕಿತ್ಸೆ ವೇಳೆ ಉಂಟಾದ ಅಪಾಯಕ್ಕೆ ಸೋಂಕು ಕಾರಣವೇ ಅಥವಾ ಡ್ರಗ್‌ ರಿಯಾಕ್ಷನ್‌ ಕಾರಣವೇ ಎಂಬುದನ್ನೂ ಈವರೆಗೆ ಆಸ್ಪತ್ರೆಯವರು ಸ್ಪಷ್ಟಪಡಿಸಿಲ್ಲ. ಈ ಪೈಕಿ ಡ್ರಗ್‌ ರಿಯಾಕ್ಷನ್‌ಗೆ ಚಿಕಿತ್ಸೆ ಮುಂದುವರಿಸಿದ್ದು, ಎಂಟು ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಭಾನುವಾರ ಬಿಡುಗಡೆಯಾಗಿದ್ದಾರೆ. ಈ ಪೈಕಿ ಐದು ಮಂದಿಗೆ ದೃಷ್ಟಿಸರಿಯಾಗಿ ಕಾಣುತ್ತಿದ್ದು, ಉಳಿದವರಲ್ಲಿ ಇನ್ನೂ ಚೇತರಿಕೆ ಕಂಡು ಬಂದಿಲ್ಲ.

ಉಳಿದಂತೆ ಹದಿನಾರು ಮಂದಿಯ ಕಣ್ಣಿನ ಸ್ಥಿತಿ ಗಂಭೀರವಾಗಿದೆ. ಯಾರಿಗೂ ದೃಷ್ಟಿಕಾಣುತ್ತಿಲ್ಲ. ದೃಷ್ಟಿಮರುಕಳಿಸಲು ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಎಂಟು ಜನ ಮಾತ್ರ ಚಿಕಿತ್ಸೆಗೆ ಸ್ವಲ್ಪ ಮಟ್ಟಿಗೆ ಸ್ಪಂದಿಸುತ್ತಿದ್ದಾರೆ. ಉಳಿದ ಎಂಟು ಮಂದಿ ಸ್ಥಿತಿ ಗಂಭೀರವಾಗಿದೆ. ಕಣ್ಣಿನ ದೃಷ್ಟಿಬರುವುದೂ ಸಹ ಅನುಮಾನ ಎಂದು ಹೇಳಲಾಗುತ್ತಿದೆ.

ಆರು ದಿನವಾದರೂ ಸ್ಪಷ್ಟತೆ ಇಲ್ಲ:

ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರಲ್ಲಿ 40ರಿಂದ 80 ವರ್ಷಕ್ಕೂ ಮೇಲ್ಪಟ್ಟವರಿದ್ದಾರೆ. ಈ ಎಲ್ಲರಿಗೂ ಒಬ್ಬರೇ ವೈದ್ಯರು ಒಂದೇ ದಿನ ಶಸ್ತ್ರಚಿಕಿತ್ಸೆ ನಡೆಸಿದ್ದು, ಯಾರಿಗೂ ದೃಷ್ಟಿಕಾಣಿಸುತ್ತಿಲ್ಲ. ಅಲ್ಲದೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಇತ್ತೀಚಿನ ದಿನಗಳಲ್ಲಿ ಸಮಾನ್ಯವಾಗಿದ್ದು, (ಡೇಕೇರ್‌ ಸೇವೆ) ರೋಗಿಗಳು ಚಿಕಿತ್ಸೆ ಮಾಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಮನೆಗೆ ಹೋಗಬಹುದಾಗಿದೆ. ಮರು ದಿನವೇ ಮೊದಲಿನಂತೆ ಎಲ್ಲವನ್ನೂ ನೋಡಬಹುದಾಗಿದೆ. ಆದರೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದವರಲ್ಲಿ 19ಕ್ಕೂ ಹೆಚ್ಚು ಮಂದಿಗೆ ಐದು ದಿನಗಳು ಕಳೆದರೂ ಕಣ್ಣು ಕಾಣಿಸುತ್ತಿಲ್ಲ.

ಕಣ್ಣು ಕಾಣುತ್ತಿಲ್ಲ, ಏನ್ಮಾಡ್ಲಿ?

ಕಣ್ಣಿನಲ್ಲಿ ಪೊರೆ ಕಾಣಿಸಿಕೊಂಡಿದ್ದರಿಂದ ಮಂಗಳವಾರ ಶಸ್ತ್ರಚಿಕಿತ್ಸೆ ಮಾಡಿದರು. ಬುಧವಾರ ಕಣ್ಣಿನ ಪಟ್ಟಿಬಿಚ್ಚಿದಾಗ ಕಣ್ಣು ಕಾಣಿಸಲಿಲ್ಲ. ಪರೀಕ್ಷೆ ಮಾಡಿ ಕಣ್ಣಿನಲ್ಲಿ ಕೀವು ತುಂಬಿದೆ ಎಂದು ಹೇಳಿ ಆಪರೇಷನ್‌ ಥಿಯೇಟರ್‌ಗೆ ಕರೆದು ಕೊಂಡು ಹೋಗಿ ಚಿಕಿತ್ಸೆ ಮಾಡಿದರು. ಮರು ದಿನವೂ ಕಣ್ಣು ಕಾಣಿಸಲಿಲ್ಲ. ಆಗಲೂ ಏನೋ ಚಿಕಿತ್ಸೆ ಮಾಡಿದರು. ಈವರೆಗೆ ಕಣ್ಣು ಕಾಣುತ್ತಿಲ್ಲ ಏನು ಮಾಡಬೇಕು ಗೊತ್ತಾಗುತ್ತಿಲ್ಲ ಎಂದು ರೋಗಿಯೊಬ್ಬರು ‘ಕನ್ನಡಪ್ರಭ’ ಜತೆ ವೇದನೆ ಹಂಚಿಕೊಂಡಿದ್ದಾರೆ.

 ಜು.9ರಿಂದ ಆಪರೇಷನ್‌ ಬಂದ್‌

ಜು.9ರಂದು ನಡೆದ ಶಸ್ತ್ರಚಿಕಿತ್ಸೆಗೆ ಒಳಗಾದ 24 ಮಂದಿಯಲ್ಲೂ ಸಮಸ್ಯೆ ಕಂಡು ಬಂದಿದೆ. ಈ ಸಮಸ್ಯೆಗೆ ಕಾರಣ ಡ್ರಗ್ಸ್‌ ರಿಯಾಕ್ಷನ್‌ ಆಗಿರಬಹುದೇ ಅಥವಾ ಮತ್ತೇನಾದರೂ ಇದೆಯೇ ಎಂಬ ಬಗ್ಗೆ ಸ್ಪಷ್ಟತೆ ದೊರೆತಿಲ್ಲ. ನಾನು ರಜೆಯಲ್ಲಿದ್ದ ಕಾರಣ ಉಸ್ತುವಾರಿ ಹೊತ್ತಿದ್ದ ಅಧಿಕಾರಿ ಅವರು ಎಲ್ಲಾ ಮುಂಜಾಗ್ರತಾ ಕ್ರಮ ವಹಿಸಿ, ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಘಟನೆ ನಡೆದ ತಕ್ಷಣವೇ ಶಸ್ತ್ರಚಿಕಿತ್ಸೆ ಕೊಠಡಿ ಮುಚ್ಚಿದ್ದು, ಕೂಡಲೇ ಡ್ರಗ್ಸ್‌ ಕಂಟ್ರೋಲರ್‌, ಆರೋಗ್ಯ ಇಲಾಖೆಯ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಅವರು ಬಂದು ಎಲ್ಲವನ್ನೂ ಪರಿಶೀಲಿಸಿ ಹೋಗಿದ್ದು, ಸೋಮವಾರ ಖಚಿತ ಕಾರಣ ಲಭ್ಯವಾಗಲಿದೆ. ಡ್ರಗ್ಸ್‌ ಕಂಟ್ರೋಲರ್‌ ಅವರಿಂದ 8-10 ದಿನಗಳಲ್ಲಿ ವರದಿ ಲಭ್ಯವಾಗಬಹುದು. ಹೀಗಾಗಿ ಅಲ್ಲಿಯವರೆಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌ ತಿಳಿಸಿದ್ದಾರೆ.

ಕಳೆದ ಮೂವತ್ತು ವರ್ಷದಲ್ಲಿ ಯಾವತ್ತೂ ಇಷ್ಟುಪ್ರಮಾಣದಲ್ಲಿ ಸಮಸ್ಯೆ ಉಂಟಾಗಿರಲಿಲ್ಲ. ನಾನು ಜೂ.29ರಿಂದ ಜು.12ರವರೆಗೆ ಸರ್ಕಾರದ ಅನುಮತಿ ಪಡೆದು ರಜೆ ಮೇಲೆ ವಿದೇಶಕ್ಕೆ ತೆರಳಿದ್ದೆ. ಜು.9ರಂದು ಶಸ್ತ್ರಚಿಕಿತ್ಸೆಗೆ ಒಳಗಾದ 24 ಮಂದಿಗೂ ಇಂತಹ ಸಮಸ್ಯೆ ಎದುರಾಗಿದೆ. ನನ್ನ ಅನುಪಸ್ಥಿತಿಯಲ್ಲಿ ಉಸ್ತುವಾರಿ ನಿರ್ದೇಶಕರಾಗಿದ್ದ ಡಾ.ದಾಕ್ಷಾಯಿಣಿ ಅವರು ಎಲ್ಲಾ ಅಗತ್ಯ ಕ್ರಮ ಕೈಗೊಂಡು ಸೂಕ್ತ ಫಾಲೋಅಪ್‌ ಚಿಕಿತ್ಸೆ ಕೊಡಿಸಿದ್ದಾರೆ. ಯಾವ ವೈದ್ಯರೂ ಉದ್ದೇಶಪೂರ್ವಕವಾಗಿ ರೋಗಿಗೆ ಹಾನಿ ಮಾಡುವುದಿಲ್ಲ. ಈಗಾಗಲೇ 24 ಮಂದಿಯಲ್ಲಿ ಎಂಟು ಮಂದಿಗೆ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಎಂಟು ಮಂದಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಉಳಿದ ಎಂಟು ಮಂದಿ ಸ್ಥಿತಿ ಗಂಭೀರವಾಗಿದೆ.

-ಡಾ.ಸುಜಾತಾ ರಾಥೋಡ್‌, ನಿರ್ದೇಶಕಿ, ಮಿಂಟೋ ಕಣ್ಣಿನ ಆಸ್ಪತ್ರೆ.