ಬೆಂಗಳೂರು : ಶ್ರೀರಾಮಚಂದ್ರಾಪುರ ಮಠಾಧೀಶ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ, 26ನೇ ಚಾತುರ್ಮಾಸ ಬೆಂಗಳೂರಿನ ಗಿರಿನಗರದಲ್ಲಿರುವ ರಾಮಾಶ್ರಮ ಆವರಣದಲ್ಲಿ ನಡೆಯಲಿದೆ.
ಚಾತುರ್ಮಾಸ್ಯ ಅಂಗವಾಗಿ ಶ್ರೀಗಳ ಪುರಪ್ರವೇಶ ಇಂದು ನಡೆಯಲಿದೆ. ಜುಲೈ 16ರಂದು ಆರಂಭವಾಗುವ ಚಾತುರ್ಮಾಸ ಸೆಪ್ಟೆಂಬರ್ 14ರಂದು ಸಂಪನ್ನವಾಗಲಿದ್ದು, ಈ ಬಾರಿಯ ಚಾತುರ್ಮಾಸಕ್ಕೆ ರಾಮಾಯಣ ಚಾತುರ್ಮಾಸ ಎಂದು ಹೆಸರಿಸಲಾಗಿದೆ. ಸೆಪ್ಟೆಂಬರ್ 14ರಂದು ಶನಿವಾರ ಸೀಮೋಲ್ಲಂಘನ ನಡೆಯಲಿದೆ ಎಂದು ಚಾತುರ್ಮಾಸ್ಯ ಕ್ರಿಯಾಸಮಿತಿ ಅಧ್ಯಕ್ಷ ರಮೇಶ್ ಕೋರಮಂಗಲ ಮತ್ತು ಕಾರ್ಯದರ್ಶಿ ವಾದಿರಾಜ ಸಾಮಗ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಚಾತುರ್ಮಾಸ್ಯದಲ್ಲಿ ಜುಲೈ 16ರಂದು ಪುನರ್ವಸು ಭವನ ಲೋಕಾರ್ಪಣೆ, 19ರಂದು ಶ್ರೀಗಳ ವರ್ಧಂತಿ, 23ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 2ರಂದು ಗಣೇಶ ಚತುರ್ಥಿ ನಡೆಯಲಿದೆ. 14ರಂದು ಸೀಮೋಲ್ಲಂಘನೆಯ ದಿನ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಶ್ರೀಗಳು ಸನ್ಯಾಸ ಸ್ವೀಕರಿಸಿ 25 ವರ್ಷಗಳನ್ನು ಪೂರೈಸಿದ್ದು, ಈ ಬಾರಿ 26ನೇ ವರ್ಷದ ಚಾತುರ್ಮಾಸವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಪ್ರತಿ ದಿನ ಶ್ರೀಗಳಿಂದ ಧಾರಾ ರಾಮಾಯಣ ಪ್ರವಚನ ಇರುತ್ತದೆ ಎಂದು ವಿವರಿಸಿದ್ದಾರೆ.