ಬದಿಯಡ್ಕ-ಸುಳ್ಯಪದವು ರಸ್ತೆಯ, ಏತಡ್ಕ-ಕಿನ್ನಿಂಗಾರು ರಸ್ತೆ 2 ದಶಕಗಳಿಂದ ಮರು ಡಾಂಬರೀಕರಣ ನಡೆಯದೆ ಬಹಳ ಶೋಚನೀಯ ಸ್ಥಿತಿಯಲ್ಲಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಕಂದಕಗಳು ರೂಪುಗೊಂಡಿದ್ದು, ನಡೆದು ಹೋಗಲು ಸಾರ್ವಜನಿಕರಿಗೆ ತೀರಾ ಕಷ್ಟವಾಗಿದೆ.
ಬಡಿಯಡ್ಕ-ಸುಳ್ಯಪದವು ರಸ್ತೆಯಲ್ಲಿ ದೊಂಪತ್ತಡ್ಕ ಕಗ್ಗಲು ಕೋರೆಯ, ಕಗ್ಗಲ್ಲು ಸಾಗಾಟ ವಾಹನಗಳು ಈ ರಸ್ತೆಯಲ್ಲಿ ಸಾಗಿಸಬಹುದಾದ ಭಾರಕ್ಕಿಂತ, ಹೆಚ್ಚು ಭಾರದ ಕಗ್ಗಲ್ಲನ್ನು ಸಾಗಿಸುವ ಕಾರಣ, ರಸ್ತೆಯಲ್ಲಿ ಇಂತಹ ಬೃಹದಾಕಾರದ ಕಂದಕಗಳು ರೂಪುಗೊಂಡಿವೆ.
ಈ ಹಿನ್ನೆಲೆಯಲ್ಲಿ ಏತಡ್ಕ-ಕಿನ್ನಿಂಗಾರು ರಸ್ತೆಯ ಆನೆಪ್ಪಳ್ಳ ಎಂಬಲ್ಲಿ ರೂಪುಗೊಂಡ ಎರಡು ಹೊಂಡಗಳಿಗೆ ಖಾಸಗಿ ವ್ಯಕ್ತಿಯೊಬ್ಬರು ಪಿ.ಡಬ್ಲ್ಯೂ.ಡಿ ಇಲಾಖೆಯಿಂದ ಅನುಮತಿ ಪಡೆಯದೇ, ಸ್ಥಳೀಯರ ಮಾತನ್ನು ಅಲ್ಲಗಳೆದು ಶನಿವಾರ ಮಣ್ಣು ಹಾಕಿದ್ದಾರೆ.
ರಸ್ತೆಯ ಹೊಂಡಗಳಿಗೆ ಮಣ್ಣು ಹಾಕಲು ಅನುಮತಿ ನೀಡಬಾರದೆಂದು ಈ ಮೊದಲು ಸ್ಥಳೀಯರು ಪಿಡಬ್ಲ್ಯೂಡಿ ಇಲಾಖೆಗೆ ದೂರು ಸಲ್ಲಿಸಿದ್ದರು. ಅನುಮತಿ ಇಲ್ಲದೆ ಈ ರೀತಿ ಮಣ್ಣು ಹಾಕಿದ್ದಕ್ಕೆ ಪಿಡಬ್ಲ್ಯೂಡಿ ಇಲಾಖೆಗೆ, ವ್ಯಕ್ತಿಯ ವಿರುದ್ಧ ದೂರು ಸಲ್ಲಿಸಲಾಗಿದೆ. ಬದಿಯಡ್ಕ ಪಿಡಬ್ಲ್ಯೂಡಿ ಅಧಿಕಾರಿಗಳ ಅನುಮತಿಯೊಂದಿಗೆ ಖಾಸಗಿ ವ್ಯಕ್ತಿ ಹೊಂಡಗಳಿಗೆ ಹಾಕಿದ ಮಣ್ಣನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ.
ಹಿಂದಿನ ವರ್ಷ ಇದೇ ರೀತಿ ದೊಂಪತ್ತಡ್ಕ ಕಗ್ಗಲ್ಲು ಕೋರೆಯ ವ್ಯಕ್ತಿಗಳು ರಸ್ತೆಯ ಹೊಂಡಕ್ಕೆ ಕಗ್ಗಲ್ಲು ಮಿಶ್ರಿತ ಮಣ್ಣು ಹಾಕಿದ್ದರು. ದೊಡ್ಡ ವಾಹನಗಳಿಗೆ ಸಂಚಾರ ಸುಲಭವಾದರೂ, ಅವೆಲ್ಲವೂ ಮಳೆಗೆ ಕೊಚ್ಚಿ ಹೋಗಿ ದ್ವಿಚಕ್ರ ವಾಹನ ಸಂಚಾರಿಗಳಿಗೆ ಹಾಗೂ ರಿಕ್ಷಾ ಮುಂತಾದ ಸಣ್ಣ ವಾಹನಗಳಿಗೆ ತೊಂದರೆ ಉಂಟಾಗಿತ್ತು.
ಪಿಡಬ್ಲ್ಯೂಡಿ ಇಲಾಖೆಯ ಅನುಮತಿ ಇಲ್ಲದೆ ರಸ್ತೆಗೆ ಮಣ್ಣು ಹಾಕಲು ಶ್ರಮಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.