ಅಡ್ಯನಡ್ಕ: ಇಲ್ಲಿನ ಜನತಾ ಪದವಿಪೂರ್ವ ಕಾಲೇಜಿನ ವನಸಿರಿ ಇಕೋ ಕ್ಲಬ್ ಹಾಗೂ ಜನತಾ ಪ್ರೌಢಶಾಲೆಯ ಶ್ಯಾಮಲಾ ಇಕೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜುಲೈ 15ರಂದು ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಮಾತನಾಡಿ, ಪರಿಸರಕ್ಕೆ ವಿಶಾಲವಾದ ವ್ಯಾಪ್ತಿಯಿದೆ. ಮಾನವನ ಚಟುವಟಿಕೆಗಳು ಪರಿಸರಕ್ಕೆ ಪೂರಕವಾಗಿರಬೇಕು. ನೀರು, ಗಾಳಿ, ಭೂಮಿಯನ್ನು ಒಳಗೊಂಡ ಜೀವಗೋಳವನ್ನು ಜೊತೆಗೂಡಿ ಸಂರಕ್ಷಿಸಬೇಕು ಎಂದರು. ಸಂಪನ್ಮೂಲ ವ್ಯಕ್ತಿ ಮುರಳಿ ಮಾಧವ ಪೆಲ್ತಾಜೆ ಅವರು ವನ್ಯಜೀವಿಗಳ ಸಂರಕ್ಷಣೆ ಹಾಗೂ ವಿವಿಧ ಬಗೆಯ ಹಾವು – ಸರೀಸೃಪಗಳ ಬಗ್ಗೆ ಮಾಹಿತಿ ನೀಡಿದರು.
ಜನತಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಹಾಗೂ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ಶುಭ ಹಾರೈಸಿದರು. ಜೀವಶಾಸ್ತ್ರ ಉಪನ್ಯಾಸಕ ರವಿಕುಮಾರ್ ಎಸ್. ಪ್ರಸ್ತಾವಿಸಿದರು. ಗಣಿತ ಉಪನ್ಯಾಸಕ ಗಣೇಶ್ ಕೆ. ಆರ್. ಪರಿಚಯಿಸಿದರು. ವಿದ್ಯಾರ್ಥಿಗಳಿಂದ ಪರಿಸರ ಗೀತೆಗಳ ಗಾಯನ ಹಾಗೂ ಗೀತರೂಪಕ ಜರುಗಿತು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ವಠಾರದಲ್ಲಿ ಸ್ವಚ್ಛತೆ ಮತ್ತು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಕೋ ಕ್ಲಬ್ ಅಧ್ಯಕ್ಷೆ ಭಾಗ್ಯಶ್ರೀ ಸ್ವಾಗತಿಸಿ, ಪ್ರಿಯಾ ಕಾರ್ಯಕ್ರಮ ನಿರೂಪಿಸಿ, ದೀಕ್ಷಾ ವಂದಿಸಿದರು.