ಬಿಹಾರ: ಮುಂಗಾರು ಆಗಮನಕ್ಕೂ ಮೊದಲು ಎಲ್ಲೂ ಮಳೆಯಾಗುತ್ತಿಲ್ಲವಲ್ಲ ಎನ್ನುವ ಆತಂಕ ಈಗ ಮುಂಗಾರು ಆರಂಭವಾದ ಬಳಿಕ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಯಾವಾಗ ಮಳೆ ನಿಲ್ಲುತ್ತೋ ಎನ್ನುವಂತಾಗಿದೆ.
ಬಿಹಾರದ ಜನತೆ ಪ್ರವಾಹದಿಂದ ತತ್ತರಿಸಿದೆ. ಈಗಾಗಲೇ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿಯನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. ನೇಪಾಳ ಪ್ರವಾಹದಲ್ಲಿ 47 ಮಂದಿ ಸಾವನ್ನಪ್ಪಿದ್ದು, ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ. ನದಿಗಳಲ್ಲಿ ನೀರಿನ ಮಟ್ಟವೂ ಹೆಚ್ಚಾಗುತ್ತಿದೆ.
ಅರಾರಿಯಾ, ಕಿಶನ್‍ಗಂಜ್, ದಬಾರ್ಂಗಾ, ಮಧುಬನಿ, ಮುಜಾಫರ್‍ಪುರ್ ಜಿಲ್ಲೆಗಳಿಗೆ ಅಪಾಯ ಉಂಟಾಗಿದೆ. ಸೀತಾಮರಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅರಾರಿಯಾದಲ್ಲಿ 11 ಮಂದಿ, ಕಿಶನ್‍ಗಂಜ್‍ನಲ್ಲಿ ನಾಲ್ಕು ಮಂದಿ, ಮಧುಬನಿಯಲ್ಲಿ ಎರಡು ಮಂದಿ ಜೀವ ಕಳೆದುಕೊಂಡಿದ್ದಾರೆ. ಉತ್ತರ ಬಿಹಾರದ 12 ಜಿಲ್ಲೆಗಳು ಪ್ರವಾಹಕ್ಕೊಳಗಾಗಿದೆ. ಸಾಕಷ್ಟು ರಸ್ತೆಗಳು ಬಿರುಕುಬಿಟ್ಟಿವೆ, ಮರಗಳು ಧರೆಗುರುಳಿವೆ, ರಸ್ತೆಯೆಲ್ಲಾ ಚರಂಡಿಯಾಗಿ ಪರಿವರ್ತನೆಗೊಂಡಿವೆ.
ಪ್ರವಾಹಕ್ಕೊಳಗಾಗಿರುವ ಪ್ರದೇಶ ವಾಸಿಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರು 350 ಕಮ್ಯುನಿಟಿ ಕಿಚನ್‍ಗಳನ್ನು ಸಿದ್ಧಪಡಿಸಿದ್ದು ಅಲ್ಲಿಂದಲೇ ಆಹಾರ ಸರಬರಾಜಾಗುತ್ತಿದೆ. ಭಾಗಮತಿ, ಕಮಲ, ಮಹಾನಂದ್ರಾ ನದಿ ಅಪಾಯಮಟ್ಟಕ್ಕೆ ತಲುಪಿದೆ. ಒಟ್ಟು 13 ನೈಸರ್ಗಿಕ ವಿಕೋಪ ನಿರ್ವಹಣಾ ತಂಡ ಕಾರ್ಯ ನಿರ್ವಹಿಸುತ್ತಿದೆ. 12 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬಿಹಾರ ಸರ್ಕಾರವು ಕೋಸಿ ಬ್ಯಾರೇಜಿನ 56 ಗೇಟುಗಳನ್ನು ತೆರೆದಿದೆ.