ವಿವೇಕಾನಂದ ಕಾಲೇಜು: ಕನ್ನಡ ಸಂಘದಿಂದ “ಸಾಹಿತ್ಯಮಂಟಪ” ಕಾರ್ಯಕ್ರಮ: ಸಾಹಿತ್ಯಕ್ಕೂ ಬದುಕಿಗೂ ನಿಕಟ ಸಂಬಂಧ: ಡಾ. ಗೀತಾಕುಮಾರಿ – ಕಹಳೆ ನ್ಯೂಸ್
ಪುತ್ತೂರು: ಕನ್ನಡ ಭಾಷೆಯು ಇದುವರೆಗೂ ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ. ಈ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದೇ ರೀತಿ ಸಾಹಿತ್ಯಕ್ಕೂ ಬದುಕಿಗೂ ನಿಕಟ ಸಂಬಂಧವಿದೆ. ಬೌದ್ಧಿಕ ಬೆಳವಣಿಗೆಯೊಂದಿಗೆ ಮಾನಸಿಕ ಬೆಳವಣಿಗೆಯೂ ಈ ಸಂಬಂಧಕ್ಕೆ ಮುಖ್ಯವಾಗುತ್ತದೆ. ಧನಾತ್ಮಕ ಚಿಂತನೆಯೇ ಉತ್ತಮ ಸಾಹಿತ್ಯದ ಮುನ್ನುಡಿಯಾಗಲು ಸಾಧ್ಯ. ಅಲ್ಲದೆ ಸಾಹಿತ್ಯ ತಮ್ಮನ್ನು ತಾವು ವಿಮರ್ಶಿಸಲು ಮುಖ್ಯ ಕಾರಣವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾಕುಮಾರಿ ಟಿ. ಹೇಳಿದರು.
ಅವರು ಶುಕ್ರವಾರ ಕಾಲೇಜಿನ ತೃತೀಯ ಐಚ್ಛಿಕ ವಿಭಾಗದ ಕನ್ನಡ ಸಂಘದ ವಿದ್ಯಾರ್ಥಿಗಳು ಆಯೋಜಿಸುವ “ಸಾಹಿತ್ಯ ಮಂಟಪ” ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿ ಮಾತನಾಡಿದರು.
ಸಮಾಜದಲ್ಲಿ ಇಂದು ಮಾನವೀಯತೆ ಮರೀಚಿಕೆಯಾಗುತ್ತಿದೆ. ಆದರೆ ಸಮಾಜದ ಏಳಿಗೆ ಅಥವಾ ಬೆಳವಣಿಗೆ ಎಂದಾಕ್ಷಣ ಅದನ್ನು ಲೆಕ್ಕಹಾಕಲು ಯಾವುದೇ ಮಾಪನವಿಲ್ಲ. ಹಾಗೆಯೇ ದೇಶ ಪ್ರೇಮವನ್ನು ನಾವು ನಡತೆಯ ಮೂಲಕ ನಿರೂಪಿಸಬೇಕು. ಅಲ್ಲದೆ ಸಾಮಾಜಿಕ ಜವಾಬ್ದಾರಿ ಒಬ್ಬ ಸಾಹಿತಿಯ ಧ್ಯೇಯ ಎಂದು ಅವರು ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣದಿಂದ ಹೊರ ಬಂದು ಪುಸ್ತಕವನ್ನು ಓದಿದರೆ ತಿಳಿವಳಿಕೆ ಅಭಿವೃದ್ಧಿ ಹೊಂದುವುದು. ಅಂತೆಯೇ ಉತ್ತಮ ಬರಹಗಾರನಾಗಬಹುದು. ಉತ್ತಮ ಬರಹಗಾರನಾಗುವ ಮೊದಲು ಉತ್ತಮ ಓದುಗನಾಗುವುದು ಮುಖ್ಯ ಎಂದು ತಿಳಿಸಿದರು.
ಸಾಹಿತ್ಯಮಂಟಪದ ಕಾರ್ಯದರ್ಶಿ ಪ್ರತಿಮಾ ಭಟ್ ಮಾತನಾಡಿ, ಸಾಹಿತ್ಯ ನಮ್ಮ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುತ್ತದೆ. ವಿದ್ಯಾರ್ಥಿಗಳನ್ನು ಸಾಹಿತ್ಯ ಸೇವೆಯಲ್ಲಿ ಹುರಿದುಂಬಿಸಲು ಮತ್ತು ಯುವಜನರಲ್ಲಿ ಪ್ರೋತ್ಸಾಹ ಹಾಗೂ ಸಾಹಿತ್ಯಾಭಿರುಚಿಯನ್ನು ಬೆಳೆಸಲು ಸಾಹಿತ್ಯಮಂಟಪ ಒಂದು ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಯುವಕವಿಗಳು ತಮ್ಮ ಲೇಖನ ಮತ್ತು ಕವಿತೆಗಳನ್ನು ವಾಚಿಸಿದರು. ವಿದ್ಯಾರ್ಥಿನಿ ದಿವ್ಯಶ್ರೀ ಪ್ರಾರ್ಥಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಪ್ರತಿಮಾ ಭಟ್ ಸ್ವಾಗತಿಸಿ, ಮೇಘನಾ ವಂದಿಸಿದರು.