ದೇಶಾದ್ಯಂತ ಮುಂಗಾರು ಭಾರೀ ಚುರುಕಾಗಿದೆ. ಇದರ ಪರಿಣಾಮ ಸಾಕಷ್ಟು ಕಡೆ ಪ್ರವಾಹವೂ ಸೃಷ್ಟಿಯಾಗುತ್ತಿದೆ. ಅಂತೆಯೇ ಕರ್ನಾಟಕದಲ್ಲೂ ಮುಂಗಾರು ಚುರುಕುಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಮುಂದಿನ 24 ಗಂಟೆಗಳು ಕಾಲ ಎಲ್ಲರೂ ಮುನ್ನೆಚ್ಚರಿಕೆ ವಹಸಿಬೇಕೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ತಿಳಿಸಿದೆ.
ಕೆಲವೇ ಗಂಟೆಗಳಲ್ಲಿ ಕರ್ನಾಟಕ, ದೆಹಲಿ, ಹೈದರಾಬಾದ್ ಸೇರಿದಂತೆ ಹಲವು ಕಡೆ ಮುಂಗಾರು ಚುರುಕುಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಮುಂಗಾರು ಆರಂಭಕ್ಕೂ ಮುನ್ನವೇ ಪೂರ್ವ ಮುಂಗಾರು ಮಳೆ ಅಲ್ಲಲ್ಲಿ ಸುರಿಯುತ್ತಿದೆ. ಕೇವಲ ಮಳೆಯಷ್ಟೇ ಅಲ್ಲದೆ ಆಲಿಕಲ್ಲು ಮಳೆ ಅನಾಹುತವನ್ನೇ ಸೃಷ್ಟಿ ಮಾಡುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಗಾಳಿ ಒತ್ತಡ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಗುಡುಗು ಸಹಿತ ಮಳೆಯಾಗಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈಗಾಗಲೇ ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 40 ಲಕ್ಷಕ್ಕೂ ಹೆಚ್ಚು ಮಂದಿ ಆಪತ್ತಿಗೆ ಸಿಲುಕಿದ್ದಾರೆ. ಕೆಲವೇ ಗಂಟೆಗಳಲ್ಲಿ ಕರ್ನಾಟಕ, ದೆಹಲಿ, ಹೈದರಾಬಾದ್ ಸೇರಿದಂತೆ ಹಲವು ಕಡೆ ಮುಂಗಾರು ಚುರುಕುಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಉತ್ತಮ ಮಳೆಯಾಗುತ್ತಿದೆ. ಜತೆಗೆ ಗೋಕರ್ಣ, ಹೊನ್ನಾವರ, ಕಾರವಾರ, ಅಂಕೋಲಾ, ಕುಮಟಾ, ಗೇರುಸೊಪ್ಪ, ಪುತ್ತೂರು, ಕುಂದಾಪುರ, ಕಿರವತ್ತಿ ಸೇರಿದಂತೆ ಮಂಗಳೂರಿನಲ್ಲಿಯೂ ವರುಣನ ಆರ್ಭಟ ಜೋರಾಗಿರಲಿದೆ. ಕನಿಷ್ಠ ಮುಂದಿನ ಐದು ದಿನಗಳು ಭಾರೀ ಮಳೆ ಸುರಿಯಲಿದೆ ಎಂದು ತಿಳಿದು ಬಂದಿದೆ.