Saturday, November 23, 2024
ಸುದ್ದಿ

ಎಂಸಿಜೆ ನೂತನ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ: ನೈಪುಣ್ಯತೆಯನ್ನು ಕಲಿಸುವುದೇ ಪತ್ರಿಕೋದ್ಯಮ ಶಿಕ್ಷಣ: ಗಣೇಶ್‍ಪ್ರಸಾದ್ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ತಮ್ಮ ನೈಪುಣ್ಯತೆಯನ್ನು ತೋರಿಸುವ ಅಥವಾ ವ್ಯಕ್ತಪಡಿಸುವ ಒಂದು ಶಿಕ್ಷಣವೆಂದರೆ ಅದು ಪತ್ರಿಕೋದ್ಯಮ. ಏಕೆಂದರೆ ಇದು ಎಲ್ಲಾ ವಿಷಯಗಳನ್ನು ಒಳಗೊಂಡ ಮಾಧ್ಯಮವಾಗಿದೆ. ಮಾತುಗಾರಿಕೆ, ಬರವಣಿಗೆ, ವೀಡಿಯೋಗ್ರಫಿ, ಫೋಟೋಗ್ರಫಿ ಹೀಗೆ ಒಂದಲ್ಲ ಒಂದು ಮಾಧ್ಯಮ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ವಿಶೇಷತೆ ಈ ಶಿಕ್ಷಣದಲ್ಲಿದೆ ಎಂದು ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕ ಗಣೇಶ್ ಪ್ರಸಾದ್ ಎ ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಜು.16ರಂದು ಕಾಲೇಜಿನ ಸ್ನಾತಕೋತ್ತರ ಸಮೂಹಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸಿದ ನೂತನ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ನಾತಕೋತ್ತರ ಪತ್ರಿಕೋದ್ಯಮವು ವಿದ್ಯಾರ್ಥಿಗಳ ಪಾಲಿನ ಸವಾಲಿನ ವಿಷಯವಾಗಿದೆ. ಏಕೆಂದರೆ ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಏನಾದರೂ ಸಾಧನೆಯನ್ನು ಮಾಡುವ ಮುಖಾಂತರ ಗುರುತಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಉತ್ತಮ ಉದ್ಯೋಗವನ್ನು ಪಡೆಯಲು ಸಾಧ್ಯ. ಹಾಗಾಗಿ ತಮ್ಮ ವಿದ್ಯಾರ್ಜನೆಯ ಸಮಯದಲ್ಲಿ ಕೌಶಲ್ಯವನ್ನು ರೂಢಿಸಿಕೊಳ್ಳುವ ಮುಖಾಂತರ ವೃತ್ತಿಯಲ್ಲಿ ಏನಾದರೂ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಐಕ್ಯುಎಸಿ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್.ಜಿ. ಶ್ರೀಧರ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ಪರಿಶ್ರಮ ಅತೀ ಅಗತ್ಯ. ಹಾಗಾಗಿ ಕಲಿಕೆಯ ಸಂದರ್ಭ ಪ್ರತಿಯೊಂದು ವಿಷಯದಲ್ಲಿ ವಿದ್ಯಾರ್ಥಿಗಳು ತಲ್ಲೀನಗೊಂಡು ಅರಿತುಕೊಳ್ಳುವುದು ಬಹುಮುಖ್ಯವಾಗಿದೆ. ಅದೇ ರೀತಿ ಪತ್ರಿಕೋದ್ಯಮ ಭರಪೂರ ಅವಕಾಶಗಳನ್ನು ಒದಗಿಸುತ್ತದೆ. ಆದ್ದರಿಂದ ಕಾಲೇಜು ಒದಗಿಸುವ ಎಲ್ಲ ಸೌಲಭ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಮಾತ್ರವಲ್ಲದೆ ವಿದ್ಯಾರ್ಥಿಗಳು ಸತತ ಪರಿಶ್ರಮದ ಮೂಲಕ ಶಿಕ್ಷಣವನ್ನು ಕಲಿತರೆ ಜೀವನದಲ್ಲಿ ಯಶಸ್ಸು ಖಚಿತ ಎಂದು ಅವರು ಹೇಳಿದರು.

ಸ್ನಾತಕೋತ್ತರ ಸಮೂಹಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ, ಪತ್ರಿಕೋದ್ಯಮ ವಿಭಾಗ ಎನ್ನುವುದು ಅವಕಾಶಗಳ ಆಗರವಾಗಿದೆ. ಏಕೆಂದರೆ ಎಲ್ಲರನ್ನೂ, ಎಲ್ಲವನ್ನೂ ಹೊರ ಜಗತ್ತಿಗೆ ತೋರಿಸುವುದು ಮಾಧ್ಯಮವಾದ ಕಾರಣ ಎಲ್ಲ ಪ್ರತಿಭೆಗಳಿಗೆ ಇಲ್ಲಿ ಅವಕಾಶ ದೊರೆಯುತ್ತದೆ.

ಮಾತ್ರವಲ್ಲದೆ ಇಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯ ಶಿಕ್ಷಣದ ಮೂಲಕ ಕಲಿಯುವುದಕ್ಕಿಂತ ಹೊರತಾಗಿ ಸಮಾಜವನ್ನು ಅರಿಯುವ ಕೆಲಸವನ್ನೂ ಮಾಡುತ್ತಾರೆ. ಲೇಖನ ಬರಹಗಳನ್ನು ಬರೆಯುವ ಕೆಲಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ನಿರಂತರವಾಗಿ ಸಾಗುತ್ತದೆ ಎಂದರು.

ಈ ಸಂದರ್ಭ ಉಪನ್ಯಾಸಕಿಯರಾದ ಭವ್ಯಾ ಪಿ.ಆರ್. ನಿಡ್ಪಳ್ಳಿ, ಸುಷ್ಮಿತಾ ಜೆ., ರಾಧಿಕಾ ಕಾನತ್ತಡ್ಕ, ಪ್ರಜ್ಞಾ ಬಾರ್ಯ, ಉಪನ್ಯಾಸಕ ಭರತ್‍ರಾಜ್ ಕರ್ತಡ್ಕ, ವಿವೇಕಾನಂದ ಮಲ್ಟಿಮೀಡಿಯಾ ಸ್ಟುಡಿಯೋದ ತಾಂತ್ರಿಕ ಸಹಾಯಕ ಸಂತೋಷ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸೀಮಾ ಸ್ವಾಗತಿಸಿದರು. ಅಭಿಷೇಕ್ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಶಿವಪ್ರಸಾದ್ ನಿರೂಪಿಸಿದರು.