Thursday, January 23, 2025
ಸುದ್ದಿ

ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆ: ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 88ಕ್ಕೆ ಏರಿಕೆ – ಕಹಳೆ ನ್ಯೂಸ್

ಕಠ್ಮಂಡು: ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 88ಕ್ಕೆ ಏರಿಕೆಯಾಗಿದ್ದು, ಇನ್ನೂ 31ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೇಪಾಳದಾದ್ಯಂತ ಬುಧವಾರವೂ ಭಾರಿ ಮಳೆ ಮುಂದುವರೆದಿದ್ದು, ಮಳೆಯಿಂದಾಗಿ ಸಂಭವಿಸಿದ ವಿವಿಧ ದುರಂತಗಳಲ್ಲಿ ಈ ವರೆಗೂ 88 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಇನ್ನೂ 31 ಮಂದಿ ನಾಪತ್ತೆಯಾಗಿದ್ದು, ಈ ವರೆಗಿನ ರಕ್ಷಣಾ ಕಾರ್ಯಾಚರಣೆಯಲ್ಲಿ 3366 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನೇಪಾಳ ಗೃಹ ಸಚಿವಾಲಯ, ಪ್ರವಾಹ ಮತ್ತು ಭೂ ಕುಸಿತ ಸೇರಿದಂತೆ ನೇಪಾಳದಲ್ಲಿ ಸಂಭವಿಸಿದ ವಿವಿಧ ಮಳೆ ಸಂಬಂಧಿತ ದುರಂತಗಳಲ್ಲಿ 88 ಮಂದಿ ಸಾವಿಗೀಡಾಗಿದ್ದಾರೆ. ಅಂತೆಯೇ ಇನ್ನು 31 ನಾಪತ್ತೆಯಾಗಿದ್ದು, ನಾಪತ್ತೆಯಾದವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

‘ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಮುಳುಗಡೆ ಪ್ರದೇಶಗಳಲ್ಲಿ ವಾಸವಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ನೂರಾರು ಗಂಜಿ ಕೇಂದ್ರಗಳನ್ನು ತೆರೆದು ಜನರಿಗೆ ಆಹಾರ ಮತ್ತು ಬಟ್ಟೆಯನ್ನು ವಿತರಣೆ ಮಾಡಲಾಗುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ರಾಜಧಾನಿ ಕಠ್ಮಂಡು ಸೇರಿದಂತೆ ನೇಪಾಳದಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಕಳೆದವಾರ ಒಂದೇ ದಿನ 100 ಮೀ.ಮೀ ಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 2008ರ ಬಳಿಕ ಇದೇ ಮೊದಲ ಬಾರಿಗೆ ಕೋಸಿ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದ್ದು, ಎಲ್ಲಾ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.