ಮದುವೆ ಮಂಟಪದಲ್ಲಿ ಸಂಭ್ರಮ ಮನೆಮಾಡಿದ್ದು, ಬಂಧು, ಬಾಂಧವರೆಲ್ಲ ಆಗಮಿಸಿದ್ದರು. ಇನ್ನೇನು ವಧು, ವರರು ದಾಂಪತ್ಯ ಜೀವನಕ್ಕೆ ಕಾಲಿಡಬೇಕು. ಕೊನೆ ಗಳಿಗೆಯಲ್ಲಿ ಮದುವೆ ಮುರಿದು ಬಿದ್ದಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಹರಿಹರ ಪಳ್ಳತ್ತಡ್ಕ ಗ್ರಾಮದ ಕಲ್ಯಾಣ ಮಂಟಪದಲ್ಲಿ ಜುಲೈ 10 ರಂದು ನಡೆಯಬೇಕಿದ್ದ ಮದುವೆ ಜಾತಿಯ ಕಾರಣಕ್ಕೆ ಮುರಿದು ಬಿದ್ದಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹುಡುಗ ಹಾಗೂ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಗ್ರಾಮವೊಂದರ ಹುಡುಗಿಯ ಮದುವೆ ನಿಗದಿಯಾಗಿತ್ತು. ವಧು, ವರರ ಕಡೆಯವರು ಕಲ್ಯಾಣಮಂಟಪಕ್ಕೆ ಬಂದಿದ್ದರು. ಮಾಂಗಲ್ಯ ಧಾರಣೆಗೆ ಕೆಲ ಸಮಯವಷ್ಟೇ ಬಾಕಿ ಇರುವ ಸಂದರ್ಭದಲ್ಲಿ ಮದುವೆ ಸಂಪ್ರದಾಯ ನಡೆಸಲಾಗಿದೆ. ವಧುವಿನ ಕಡೆಯವರ ಸಂಪ್ರದಾಯ ಗಮನಿಸಿದ ವರನ ಸಂಬಂಧಿಕರು ಜಾತಿಯ ಬಗ್ಗೆ ಪ್ರಶ್ನಿಸಿದ್ದು ಹುಡುಗಿಯ ಜಾತಿ ಗೊತ್ತಾಗುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತರರ್ಜಾತಿ ವಿವಾಹಕ್ಕೆ ಹುಡುಗ ಮತ್ತು ಹುಡುಗಿಯ ಕಡೆಯವರು ಒಪ್ಪದ ಕಾರಣ ಕೊನೆ ಕ್ಷಣದಲ್ಲಿ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ.