Monday, November 25, 2024
ರಾಜಕೀಯ

ಮಿಥುನ್ ರೈ ಕೊಟ್ಟಿರುವ ಹೇಳಿಕೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಅಲ್ಲ : ಭರತ್ ಶೆಟ್ಟಿ ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಬಳಿ ಪ್ರತಿಭಟನೆ ಸಂದರ್ಭ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಳಸಿರುವ ಪದಗಳ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸದರ ವಿರುದ್ಧ ಮಿಥುನ್ ರೈ ಆಕ್ಷೇಪಾರ್ಹ ಪದ ಬಳಸಿದ ಕಾರಣ ಈ ಕೂಡಲೇ ಕ್ಷಮೆ ಯಾಚಿಸಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ. ಮಿಥುನ್ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ, “ಸುರತ್ಕಲ್ ಟೋಲ್ ಗೇಟ್ ಯುಪಿಎ ಅವಧಿಯಲ್ಲಿ ಪ್ರಾರಂಭವಾಗಿತ್ತು. ಈ ಸತ್ಯವನ್ನು ಮರೆಮಾಚಿ ಬಿಜೆಪಿ ಮೇಲೆ ಸುಳ್ಳು ಆರೋಪ ಹಾಕಿ ಜನರ ದಾರಿ ತಪ್ಪಿಸುವ ವಿಫಲ ಯತ್ನ ಮಾಡುವ ಭರದಲ್ಲಿ ಮಿಥುನ್ ರೈ ಕೊಟ್ಟಿರುವ ಹೇಳಿಕೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಅಲ್ಲ” ಎಂದು ಕಿಡಿಕಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ಜನಪ್ರತಿನಿಧಿಯೊಬ್ಬರಿಗೆ ಮರ್ಯಾದೆ ಕೊಡುವುದನ್ನು ಮೊದಲು ಕಲಿಯಿರಿ. ನಳಿನ್ ಕುಮಾರ್ ಕಟೀಲ್ ಅವರು ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಸುರತ್ಕಲ್ ಟೋಲ್ ಗೇಟ್ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಮಾತನಾಡಿದ್ದಾರೆ. ಪತ್ರ ವ್ಯವಹಾರ ಮಾಡಿದ್ದಾರೆ. ಅದನ್ನೆಲ್ಲ ಪ್ರಚಾರಕ್ಕಾಗಿ ಮಾಡಿಲ್ಲ. ಆದರೆ ಮಿಥುನ್ ರೈ ಅವರು ಸಂಸದರಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂದು ಹೇಳುವ ಮೂಲಕ ಪ್ರಚಾರದಲ್ಲಿ ಇರಲು ಬಯಸುತ್ತಾರೆ” ಎಂದು ಕುಟುಕಿದರು.

ಯುಪಿಎ ಅವಧಿಯಲ್ಲಿ ಆರಂಭವಾದ ಸುರತ್ಕಲ್ ಟೋಲ್ ಗೇಟಿಗೆ ಆಗಲೇ ವಿರೋಧ ವ್ಯಕ್ತವಾಗಿತ್ತು. ಪಾಲಿಕೆಯ ವ್ಯಾಪ್ತಿಯೊಳಗೆ ಟೋಲ್ ಗೇಟ್ ಇರಬಾರದು ಎನ್ನುವ ನಿಯಮದ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಸ್ಥಳೀಯರು ಮನವರಿಕೆ ಮಾಡಿದ್ದರು. ಆದರೆ ಸ್ಥಳೀಯರಿಗೆ ಸುಂಕ ಇರುವುದಿಲ್ಲ ಎನ್ನುವ ಭರವಸೆ ನೀಡಿ ಯುಪಿಎ ಟೋಲ್ ಸಂಗ್ರಹ ಮಾಡಲು ಆರಂಭಿಸಿತ್ತು ಎಂದು ಅವರು ಆರೋಪಿಸಿದರು.