Monday, November 25, 2024
ರಾಜಕೀಯ

ಕೇಂದ್ರ ರೈಲ್ವೇ ಸಚಿವರನ್ನು ಭೇಟಿಯಾಗಿ ಹಲವು ಬೇಡಿಕೆಯಿಟ್ಟ ಸಂಸದರು – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಮಂಗಳೂರು ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯವರು ಕೇಂದ್ರ ರಾಜ್ಯ ರೇಲ್ವೇ ಖಾತೆ ಸಚಿವ ಸುರೇಶ್ ಅಂಗಡಿ ಯವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಭೇಟಿಯಾಗಿ ಮಂಗಳೂರನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈರುತ್ಯ ರೈಲ್ವೇಗೆ ಸೇರಿಸುವಂತೆ 2004ರಲ್ಲಿ ರೈಲ್ವೇ ಬೋರ್ಡ್‍ನಿಂದ ಗೆಜೆಟ್ ನೋಟಿಫಿಕೇಶನ್ ಆಗಿರುತ್ತದೆ. ತೋಕೂರಿನಿಂದ ಮಂಗಳೂರು ಸೆಂಟ್ರಲ್ ನೇತ್ರಾವತಿವರೆಗೆ ಪಾಲಕ್ಕಾಡ್ ರೈಲ್ವೇ ವಿಭಾಗದಲ್ಲಿರುವ ಪ್ರದೇಶವನ್ನು ಬದಲಿಸುವಂತೆ ದಾಖಲೆಗಳನ್ನು ಸಲ್ಲಿಸಲಾಯಿತು. “ಈ ವಿಷಯ ನನ್ನ ಗಮನಕ್ಕೆ ಬಂದಿದ್ದು ನಾನು ಪರಿಶೀಲನೆ ನಡೆಸಿ ಸೂಕ್ತಕ್ರಮ ಕೈಗೊಳ್ಳುತ್ತೇನೆ” ಎಂದು ಸಚಿವ ಸುರೇಶ್ ಅಂಗಡಿ ಆಶ್ವಾಸನೆ ನೀಡಿದರು.

ಮಂಗಳೂರು ಬೆಂಗಳೂರು ರೈಲು ಸಂಖ್ಯೆ 16511/12 ಮತ್ತು ರೈಲು ಸಂಖ್ಯೆ 16515/14 ವಾರದಲ್ಲಿ 4 ದಿನ ಶ್ರವಣಬೆಳಗೊಳ 3 ದಿನ ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದೆ. ಇದನ್ನು 7 ದಿನವೂ ಶ್ರವಣಬೆಳಗೊಳ ಮಾರ್ಗದಲ್ಲಿ ಓಡಿಸುವುದು ಮತ್ತು ರೈಲು ಸಂಖ್ಯೆ 16585/86 ಯಶವಂತಪುರ – ಮಂಗಳೂರು ಹಗಲು ರೈಲನ್ನು ವಾರದ 7 ದಿನವೂ ಓಡಿಸಬೇಕು. ಈಗಾಗಲೇ ಮಂಜೂರಾಗಿರುವ ಮಂಗಳೂರು ಕೇಂದ್ರ ರೈಲುನಿಲ್ದಾಣದ 4 ಹಾಗೂ 5ನೇ ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿಗೆ ಮೂರು ವರ್ಷಗಳ ಹಿಂದೆ ರೈಲ್ವೇ ಬಜೆಟ್‍ನಲ್ಲಿ ಅನುದಾನ ಬಿಡುಗಡೆಯಾಗಿದ್ದರೂ ಈವರೆಗೆ ಕಾಮಗಾರಿ ಪ್ರಾರಂಭಗೊಂಡಿರುವುದಿಲ್ಲ ಎಂದು ತಿಳಿಸಿದಾಗ ಕೂಡಲೇ ಸ್ಪಂದಿಸಿದ ಸಚಿವರು ಪಾಲಕ್ಕಾಡ್ ಡಿ.ಆರ್.ಎಂಗೆ ದೂರವಾಣಿ ಕರೆ ಮಾಡಿ ಈ ಮೂರು ಬೇಡಿಕೆಗಳನ್ನು ಕೂಡಲೇ ಪೂರೈಸುವಂತೆ ಆದೇಶಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಮೀರಜ್ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಗೇಜ್ ಪರಿವರ್ತನೆಯ ಸಂದರ್ಭ 1994ರಲ್ಲಿ ತಾತ್ಕಾಲಿಕವಾಗಿ ರದ್ದುಗೊಂಡಿದ್ದು, ಸದ್ರಿ ರೈಲನ್ನು ಪುನ:ರಾರಂಭಿಸುವ ಕುರಿತಾದ ಮನವಿಗೆ ನಾನು ಪರಿಶೀಲಿಸಿ ಖಂಡಿತ ಕ್ರಮ ಜರುಗಿಸುವುದಾಗಿಯೂ, ಮಂಗಳೂರು ರೈಲು ನಿಲ್ದಾಣವನ್ನು ಅಂತರಾಷ್ಟ್ರೀಯ ಗುಣಮಟ್ಟದ ರೈಲು ನಿಲ್ದಾಣ ಮಾಡುವುದಾಗಿ 2009-10ರ ಬಜೆಟ್‍ನಲ್ಲಿ ಘೋಷಿಸಿದ್ದರು. ಈ ವರೆಗೆ ಯಾವುದೇ ಪ್ರಗತಿಯಾಗದೆ ಇರುವುದನ್ನು ಪರಿಶೀಲಿಸುವ ಆಶ್ವಾಸನೆ ನೀಡಿದ್ದಾರೆ. ಕಾಣಿಯೂರು-ಕಾಞಂಗಾಡ್ ಹೊಸರೈಲು ಮಾರ್ಗದ ಸರ್ವೆ ಕಾರ್ಯವನ್ನು ಕರ್ನಾಟಕ ರಾಜ್ಯ ಸರಕಾರದ ಸಹಕಾರದೊಂದಿಗೆ ಕೂಡಲೇ ಪ್ರಾರಂಭಿಸಲು ಆದೇಶವನ್ನು ಇದೇ ವೇಳೆ ಮಾಡಿದ್ದಾರೆ.
ಮನವಿ ಸಲ್ಲಿಸುವ ವೇಳೆ ಪಶ್ಚಿಮ ಕರಾವಳಿ ರೈಲು ಅಭಿವೃದ್ಧಿ ಯಾತ್ರಿ ಸಮಿತಿಯ ಅಧ್ಯಕ್ಷ ಜಿ.ಹನುಮಂತ ಕಾಮತ್, ಎಂ.ನರೇಶ್ ಶೆಣೈ, ಗುರುಪ್ರಸಾದ್ ಹಾಗೂ ಸಂಜಯ್ ಪೈ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು