Wednesday, November 27, 2024
ಸುದ್ದಿ

ಮನೆಯೊಳಗೆ ಯಕ್ಷ ಮಾತೆಯ ಗೆಜ್ಜೆ ನಿನಾದ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕರಾವಳಿಯ ಹೆಮ್ಮೆಯ ಜಾನಪದ ಕಲೆ ಯಕ್ಷಗಾನಕ್ಕೆ ಶತಮಾನಗಳ ಇತಿಹಾಸವಿದೆ. ಆರಾಧನ ಕಲೆಯಾದ ಯಕ್ಷಗಾನ ಆಧುನಿಕ ದಿನಗಳಲ್ಲಿಯೂ ಜೀವಂತಿಕೆ ಉಳಿಸಿಕೊಂಡಿದೆ ಎಂದರೆ ಹಲವಾರು ಯಕ್ಷಗಾನ ಸಂಘಗಳು ಹಾಗೂ ಕಲಾವಿದರು ನಮ್ಮ ನಡುವೆ ಇರುವುದೇ ಕಾರಣ.

ಇಂತಹ ಒಂದು ಪ್ರಯತ್ನದಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಚಿಕ್ಕಮೇಳ ನಿರತವಾಗಿದೆ. ಯಕ್ಷಗಾನವನ್ನು ಉಳಿಸಿ, ಬೆಳೆಸಿ, ಯಕ್ಷಗಾನವನ್ನು ಪ್ರತಿ ಮನೆಗೆ ತಲುಪಿಸುವ ದಿಶೆಯಲ್ಲಿ ಮನೆಬಾಗಿಲಿಗೆ ತಿರುಗಾಟವನ್ನು ಜೂ. 24ರಿಂದ ಆರಂಭಿಸಿದೆ. ಬಿಳಿನೆಲೆ, ಸುಬ್ರಹ್ಮಣ್ಯ ಪರಿಸರದಲ್ಲಿ ಮನೆ ಮನೆಗಳಿಗೆ ತೆರಳಿ ಪ್ರದರ್ಶನದ ಮೂಲಕ ಯಕ್ಷಗಾನ ಕಂಪನ್ನು ಪಸರಿಸಿ ಕಲೆಯನ್ನು ಉಳಿಸುವ ಶ್ರೇಷ್ಠ ಕಾರ್ಯದಲ್ಲಿ ಈ ಮೇಳ ತೊಡಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜು. 17ರಂದು ಸುಬ್ರಹ್ಮಣ್ಯ ಪರಿಸರದ ಕುಲ್ಕುಂದ ಭಾಗದಲ್ಲಿ ಮನೆ ಮನೆ ತೆರಳಿ ಯಕ್ಷಗಾನ ಪ್ರದರ್ಶಿಸಿದರು. ಸ್ವಸ್ತಿಕವಿರಿಸಿ, ದೀಪ ಪ್ರಜ್ವಲಿಸಿ ದೇವತಾ ಪ್ರಾರ್ಥನೆ ಮೂಲಕ ಈಶ್ವರ ಮತ್ತು ಪಾರ್ವತಿ ದೇವಿಯ ಪಾತ್ರಧಾರಿಗಳು ಕಥಾ ಪ್ರಸಂಗದ ಒಂದು ಆಯ್ದ ಭಾಗದ ಪ್ರದರ್ಶನ ನಡೆಸಿದರು. ಚಿಕ್ಕ ಮೇಳೆ ತೆರಳುವ ಮುಂಚಿತ ಭೇಟಿ ನೀಡುವ ಮನೆಗಳಿಗೆ ತೆರಳಿ, ಮೇಳ ಬರುವ ಸಮಯವನ್ನು ತಿಳಿಸಲಾಗುತ್ತದೆ. ದಿನದಲ್ಲಿ ಸಂಜೆ 7ರಿಂದ ರಾತ್ರಿ 10ರ ತನಕ ಚಿಕ್ಕ ಮೇಳ ತಿರುಗಾಟ ನಡೆಸಿ, ಪ್ರದರ್ಶನ ನೀಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿ ಭಾಗದಲ್ಲಿ ಪ್ರತಿ ಮನೆಯಲ್ಲಿ ಯಕ್ಷಗಾನ ಅಭಿಮಾನಿಗಳು ಇರುತ್ತಾರೆ. ಮನೆಗೆ ಬಂದ ಕಲಾ ತಂಡವನ್ನು ಮನೆ ಮಂದಿ ಸ್ವಾಗತಿಸುತ್ತಾರೆ. ಹೂವು, ಹಣ್ಣು, ಅಕ್ಕಿ, ತೆಂಗಿನಕಾಯಿ ಮತ್ತು ದೀಪ ಇಟ್ಟು, ಪ್ರಾರ್ಥನೆ ಸಲ್ಲಿಸಿ ಯಾವುದಾದರೂ ಪ್ರಸಂಗದ ಒಂದು ಭಾಗವನ್ನು ಆಡುತ್ತಾರೆ. ಪ್ರದರ್ಶನ ಬಳಿಕ ಪೂಜೆಯ ಪ್ರಸಾದವನ್ನು ಅಲ್ಲಿದ್ದವರಿಗೆ ವಿತರಿಸಲಾಗುತ್ತದೆ.
ಯಕ್ಷಮಾತೆಯ ಗೆಜ್ಜೆಯ ನಿನಾದ ಮನೆಯೊಳಗೆ ಕೇಳಿಸಿದರೆ ಮನೆಗೆ ಶುಭಪ್ರದ ಎನ್ನುವ ನಂಬಿಕೆ ಕರಾವಳಿಯಲ್ಲಿ ಇರುವುದರಿಂದ ಚಿಕ್ಕ ಮೇಳ ಮನೆಗೆ ಆಗಮಿಸಿದಾಗ ಮನೆ ಸದಸ್ಯರು ಬಹಳ ಸಂಭ್ರಮ ಪಡುತ್ತಾರೆ. ಚಿಕ್ಕ ಮೇಳಗಳು ಮನೆ ಮನೆಗೆ ತೆರಳಿ ಪ್ರದರ್ಶನ ನೀಡುವುದರಿಂದ ಎಳೆಯರಲ್ಲೂ ಈ ಕಲೆಯ ಕುರಿತಾಗಿ ಆಸಕ್ತಿ ಬೆಳೆಯಲು ಸಾಧ್ಯವಾಗುತ್ತದೆ. ಅವರೂ ಯಕ್ಷಗಾನ ಕಲಿಯಲು ಮುಂದಾಗುತ್ತಾರೆ.