ಕಡಬ : ಅಜ್ಞಾನದ ಕತ್ತಲೆಯನ್ನು ಜ್ಞಾನದ ಮೂಲಕ ತೊಲಗಿಸಬಹುದು. ಮನುಷತ್ವವನ್ನು ಬೆಳೆಸಿಕೊಳ್ಳಲು ವಿದ್ಯೆಯೇ ಸಾಧನ. ಬೆಳಕನ್ನು ನೀಡುವಂತಹ ವಿದ್ಯೆಯನ್ನು ಗುರುವು ಭೋಧಿಸುತ್ತಾರೆ. ಗುರುವನ್ನು ದೇವರಂತೆ ಕಾಣುವ ಶಿಷ್ಯನು ಉತ್ತುಂಗಕ್ಕೆ ಏರುವುದರಲ್ಲಿ ಸಂಶಯವಿಲ್ಲವೆಂದು ವಿಶ್ರಾಂತ ಶಿಕ್ಷಕ ಸೀತಾರಾಮ್ ರಾವ್ ಪುತ್ರಬೈಲು ಇವರು ಹೇಳಿದರು.
ಇವರು ಸರಸ್ವತೀ ವಿದ್ಯಾಲಯ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾಲಯದಲ್ಲಿ ನಡೆದ ಗುರುಪೂರ್ಣಿಮೆ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಮಾತನಾಡಿ ಸರಕಾರದ ನೀತಿಗಳು, ಪೋಷಕರ, ವಿದ್ಯಾರ್ಥಿಗಳ ಧೋರಣೆಯಿಂದಾಗಿ ಇಂದು ಶಿಕ್ಷಕ ವೃತ್ತಿ ಸವಾಲಿನಿಂದ ಕೂಡಿದೆ. ಆದರೆ ಶಿಕ್ಷಕ ತನ್ನ ಬದ್ಧತೆಯಿಂದ ಹಿಂದೆ ಸರಿಯದೆ ವೃತ್ತಿಧರ್ಮವನ್ನು ಕಾಪಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ಮಂಡಳಿ ನಿರ್ದೇಶಕಿ ಪುಲಸ್ತ್ಯಾ ರೈ ಅವರು ನಮಗೆ ವಿದ್ಯೆ ಹೇಳಿದ ಗುರುಗಳ ಜೊತೆಗೆ ಸಮಾಜದಲ್ಲಿರುವ ಹಲವಾರು ಹಿರಿಯರು ಗುರುಸ್ಥಾನದಲ್ಲಿದ್ದಾರೆ. ಅವರೆಲ್ಲರೂ ಸಮಾಜದ ಆಸ್ತಿಗಳು, ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರ ಸಿಗುತ್ತಿರಬೇಕು ಎಂದರು.
ವೇದಿಕೆಯಲ್ಲಿ ಪ್ರೌಢ ವಿಭಾಗದ ಮುಖ್ಯಸ್ಥ ಶೈಲಶ್ರೀ ರೈ ಉಪಸ್ಥಿತರಿದ್ದರು. ಪದವಿಪೂರ್ವ ವಿಭಾಗದ ಕಾಲೇಜು ನಾಯಕ ಮಯೂರ್ ಎಂ ದ್ವಿತೀಯ ಪಿಯುಸಿ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಉಪನಾಯಕ ನಿಹಾರ್ ರೈ ಒಂಬತ್ತನೇ ತರಗತಿ ವಂದಿಸಿ, ಜಸ್ಮಿತ್ ಕೆ ಪಿ ಒಂಬತ್ತನೇ ತರಗತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.