ಸಿದ್ಧರಾಮಯ್ಯ ಮಂಗಳವಾರ ಸಂಜೆಗೆ ವಿಶ್ವಾಸಮತ ಯಾಚನೆ ಚರ್ಚೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ ಮಾತಿನಿಂದ ಸಿಎಂ ಕುಮಾರಸ್ವಾಮಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ.
ಇಂದು ಸಂಜೆ 6 ಗಂಟೆಗೆ ವಿಶ್ವಾಸಮತ ಯಾಚನೆ ಚರ್ಚೆ ಮುಗಿಸಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಸದನದಲ್ಲಿ ಸ್ಪೀಕರ್ ಅವರಿಗೆ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ ಇದಕ್ಕೆ ಸಿಎಂ ಕುಮಾರಸ್ವಾಮಿ ಅವರಿಗೆ ಒಪ್ಪಿಗೆ ಇಲ್ಲ ಎಂದು ಹೇಳಲಾಗಿದೆ.
ಮಂಗಳವಾರದ ಬಳಿಕ ವಿಶ್ವಾಸಮತಕ್ಕೆ ಅವರು ನಿರ್ಧರಿಸಿದ್ದರು. ಜ್ಯೋತಿಷಿ ಹೇಳಿರುವಂತೆ ಮಂಗಳವಾರದ ನಂತರ ಒಳ್ಳೆಯ ಕಾಲ ಬರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಮಂಗಳವಾರದ ಬಳಿಕ ವಿಶ್ವಾಸಮತಕ್ಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಈಗ ಏಕಾಏಕಿ ಸಿದ್ದರಾಮಯ್ಯ ಅವರಿಂದ ವಿಶ್ವಾಸಮತ ಹೇಳಿಕೆಯಿಂದ ಸಿಎಂ ಕಂಗಾಲಾಗಿದ್ದಾರೆ. ಇಂದು ವಿಶ್ವಾಸಮತ ಬೇಡವೆಂದು ಹೆಚ್.ಡಿ. ರೇವಣ್ಣ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಜೆ.ಸಿ. ಮಾಧುಸ್ವಾಮಿ, ಎಲ್ಲದಕ್ಕೂ ಲಿಮಿಟ್ ಇರುತ್ತದೆ. ನಿಂಬೆಹಣ್ಣು, ಶಾಸ್ತ್ರ ಕೇಳಿ ಕಲಾಪ ಮುಂದೂಡಿದರೆ ಸರ್ಕಾರ ಉಳಿಯುತ್ತಾ, ಬಹುಮತ ಇಲ್ಲವೆನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.