ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯೊಂದಿಗೆ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಸರಕಾರದ ಆದೇಶದಂತೆ ಜಾಸ್ತಿಗೊಳಿಸಲಾಗಿದೆ. ಈ ಹೊಸ ತೆರಿಗೆಯು ಅತ್ಯಧಿಕವಾಗಿದೆ ಎಂದು ಬಂಟ್ವಾಳ ಪುರವಾಸಿಗಳು ಶಾಸಕ ರಾಜೇಶ್ ನಾಯ್ಕ್ ಅವರಿಗೆ ದೂರನ್ನು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಪುರಸಭೆಯಲ್ಲಿ ವಿಶೇಷ ಸಭೆ ಕರೆದು ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಕಡಿತಗೊಳಿಸಲು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಇದರಂತೆ ಜುಲೈ 20ರಂದು ಆಡಳಿತಾಧಿಕಾರಿಯವರ ಸಾಮಾನ್ಯ ಸಭೆಯಲ್ಲಿ ಮನೆಗಳ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿ ವಾಣಿಜ್ಯ ಕೈಗಾರಿಕಾ ಹಾಗೂ ಮಳಿಗೆಗಳ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಡಿ.ಪಿ.ಆರ್ ದರಗಿಂತ ಕಡಿಮೆ ಮಾಡಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.