ಪುತ್ತೂರು: ವಿದ್ಯಾರ್ಥಿಗಳು ಅಧ್ಯಯನದ ಸಂದರ್ಭದಲ್ಲಿ ಯಾವುದೇ ರೀತಿಯ ಅನಗತ್ಯ ಆಮಿಷಗಳಿಗೆ ಗುರಿಯಾಗದೆ ತಮ್ಮ ಮೂಲ ಉದ್ದೇಶವನ್ನು ತಲುಪುವತ್ತ ಗಮನಹರಿಸಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೆಂದ್ರದ ಮುಖ್ಯಸ್ಥ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ಆಶ್ರಯದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ವಾಗತ ಮತ್ತು ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2007ರಲ್ಲಿ ಎಂಎಸ್‍ಡಬ್ಲ್ಯೂ ವಿಭಾಗದೊಂದಿಗೆ ಆರಂಭಗೊಂಡ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರವು, ಪ್ರಸ್ತುತ ಆರು ಸ್ನಾತಕೋತ್ತರ ವಿಭಾಗಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಮಂಗಳೂರು ವಿವಿಯ ಸಂಯೋಜನೆಗೆ ಒಳಪಡುವ ಈ ಅಧ್ಯಯನ ಕೇಂದ್ರವು ಪೂರ್ಣಪ್ರಮಾಣದ ಎಲ್ಲಾ ಸೌಲಭ್ಯವನ್ನು ಹೊಂದಿದೆ.
ಜಾತಿ, ಮತ, ಧರ್ಮ, ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುವ ಮೂಲಕ ಇಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಸಂವಹನ ಕಲೆಯನ್ನೂ ಬೆಳೆಸಿಕೊಂಡಾಗ ಪಡೆದ ಜ್ಞಾನ ವ್ಯರ್ಥವಾಗುವುದನ್ನು ತಪ್ಪಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹಾ ಮಾತನಾಡಿ, ಪ್ರಸ್ತುತ ಶಿಕ್ಷಣದ ಮೂಲ ಉದ್ದೇಶವೇ ಕಳಚಿ ಹೋದಂತೆ ಭಾಸವಾಗುತ್ತಿದೆ. ಶಿಕ್ಷಣವನ್ನು ಉದ್ಯಮವಾಗಿ ಪರಿಗಣಿಸಲ್ಪಡುತ್ತಿರುವುದು ಅತ್ಯಂತ ಖೇದಕರ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮೌಲ್ಯಗಳನ್ನೂ ಪಡೆದಾಗ ಜೀವನದ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಬಹುದು. ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಗುರು ವೃಂದದವರ ಮಾರ್ಗದರ್ಶದೊಂದಿಗೆ ಮುನ್ನಡೆದಾಗ ಭವಿಷ್ಯವು ಫಲಪ್ರದವೆನಿಸುವುದು ಎಂದರು.
ಸುಶ್ಮಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಯಶಸ್ವಿ ಕೆ ಎಸ್ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ಸಂಯೋಜಕ ಶೀತಲ್ ಕುಮಾರ್ ಎನ್ ವಿ ವಂದಿಸಿದರು.