ರಾಜೀನಾಮೆ ಬಿಸಾಕಿ ಹೋಗೋಕೆ ಸಿಎಂಗೆ ಏನು ಕಷ್ಟ:ಇಲ್ಲದಿರೋ ಬಹುಮತ ಹೇಗ್ ಸಾಬೀತು ಪಡಿಸುತ್ತಾರೆ: ಕೆಂಡ ಕಾರಿದ ಕಾಂಗ್ರೆಸ್ ಎಂಎಲ್ಎಗಳು – ಕಹಳೆ ನ್ಯೂಸ್
ಬೆಂಗಳೂರು: ರಾಜ್ಯ ರಾಜಕೀಯ ಪ್ರಹಸನ ಮೂರು ವಾರಗಳಾದರೂ ಕೊನೆಯಾಗಿಲ್ಲ. ಒಂದೆಡೆ ದೋಸ್ತಿ ನಾಯಕರು ಜಪ್ಪಯ್ಯ ಅಂದ್ರೂ ಮುಂಬೈ ಬಿಟ್ಟು ಕದಲಲು ರೆಡಿಯಾಗುತ್ತಿಲ್ಲ. ಇತ್ತ ದೋಸ್ತಿ ನಾಯಕರು ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಟ್ಟರೂ ವಿಶ್ವಾಸಮತ ಮಂಡಿಸುತ್ತಿಲ್ಲ.
ವಿಶ್ವಾಸಮತ ವಿಳಂಬದಿಂದ ಮುಂದುವರೆಯುತ್ತಿರುವ ರಾಜಕೀಯ ಪ್ರಹಸನ ಕಂಡು ಬೇಸತ್ತ ಕಾಂಗ್ರೆಸ್ ಎಂಎಲ್ಎಗಳು ಮುಖ್ಯಮಂತ್ರಿ ಮೇಲೆ ಕೆಂಡ ಕಾರಿದ್ದಾರೆ. ‘ಬೇಡ ಅಂದ್ರೂ ಸಿಎಂ ಹೀಗೆ ಯಾಕೆ ಮಾಡ್ತಿದ್ದಾರೆ..? ರಾಜೀನಾಮೆ ಬಿಸಾಕಿ ಹೋಗೋಕೆ ಸಿಎಂಗೆ ಏನು ಕಷ್ಟ..? ಇಲ್ಲದಿರೋ ಬಹುಮತ ಹೇಗ್ ಸಾಬೀತು ಪಡಿಸುತ್ತಾರೆ..? ಜನ ಪ್ರತಿನಿತ್ಯ ನಡೆಯುತ್ತಿರುವ ರಾಜಕೀಯ ಡ್ರಾಮಾ ನೋಡಿ ಉಗಿಯೋ ಹಾಗಾಗಿದೆ..!’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಿಸಿಎಂ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ವಿರುದ್ಧವೂ ಗುಡುಗಿದ ಶಾಸಕರು ‘ಪರಮೇಶ್ವರ್ ಕೂಡ ಸಿಎಂ ಅಣತಿಯಂತೆ ಆಡುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಕುಮಾರಸ್ವಾಮಿಯವರಂತೆ ವಚನ ಭ್ರಷ್ಟರಾಗುತ್ತಿದ್ದಾರೆ. ಕುಮಾರಸ್ವಾಮಿ ಮಾತು ಕೇಳಿ ಹೀಗೆಲ್ಲ ಆಡ್ತಿದ್ದಾರೆ. ಇದರಿಂದ ಸಿದ್ದರಾಮಯ್ಯಗೂ ಡ್ಯಾಮೇಜ್, ಪಕ್ಷಕ್ಕೂ ಡ್ಯಾಮೇಜ್ ಆಗ್ತಿದೆ. ಇವತ್ತಾದ್ರು ವಿಶ್ವಾಸಮತ ಯಾಚನೆ ಮಾಡಿದ್ರೆ ಅಲ್ಪ ಸ್ವಲ್ಪ ಮರ್ಯಾದೆ ಉಳಿಯುತ್ತೆ. ಇಲ್ಲದಿದ್ದರೆ ಜನ ಹೋಟೆಲ್ ಗೆ ಬಂದು ಉಗೀತಾರೆ. ಕ್ಷೇತ್ರದ ಜನ ಅಷ್ಟೇ ಅಲ್ಲಾ ನಮ್ಮ ನಮ್ಮ ಮನೆಯವರನ್ನೂ ನೋಡೋಕೆ ಆಗುತ್ತಿಲ್ಲ’ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆನ್ನಲಾಗುತ್ತಿದೆ.