ಮಲ್ಪೆ: ಮಲ್ಪೆ ಕಡಲತೀರದಲ್ಲಿ ಶನಿವಾರ ಸಂವೇದನಾ ಫೌಂಡೇಶನ್ ವತಿಯಿಂದ ಸ್ವಾಮಿ ವಿವೇಕಾನಂದರ 155ನೇ ಜಯಂತಿಯ ಅಂಗವಾಗಿ ವಂದೇಮಾತರಂ ರಣಮಂತ್ರದುಚ್ಚಾರ ಕಾರ್ಯಕ್ರಮ ಜರಗಿತು. ಭವಿಷ್ಯಕ್ಕಾಗಿ ಪ್ರಕೃತಿಯನ್ನು ರಕ್ಷಿಸಿ ಎಂಬ ಸಂದೇಶವನ್ನೂ ಇಲ್ಲಿ ರವಾನಿಸಲಾಯಿತು. ವಂದೇಮಾತರಂ ರಣಮಂತ್ರದುಚ್ಚಾರ ವಿಶ್ವದಾಖಲೆಯೂ ಆಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ ಕಾಲೇಜುಗಳಿಂದ ಸುಮಾರು 4,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ವಂದೇ ಮಾತರಂ ಗೀತೆಯನ್ನು ಹಾಡಿದರು. ಇದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿತು.
ಇದಕ್ಕೂ ಮುನ್ನ ಮಲ್ಪೆ ಗಾಂಧಿ ಶತಾಬ್ದಿ ಮೈದಾನದಿಂದ ಮಲ್ಪೆ ಬಸ್ ನಿಲ್ದಾಣನ ಮೂಲಕ ಬೀಚ್‌ವರೆಗೆ 200 ಮೀಟರ್ ಉದ್ದ, 9 ಅಡಿ ಅಗಲದ ತಿರಂಗ ಧ್ವಜವನ್ನು ಹಿಡಿದು ವಿದ್ಯಾರ್ಥಿಗಳು, ಸಾರ್ವಜನಿಕರು ಶೋಭಾಯಾತ್ರೆಯನ್ನು ನಡೆಸಿದರು. ದೇಶಭಕ್ತಿ, ರಾಷ್ಟ್ರ ಜಾಗೃತಿ ಮೂಡಿಸುವ ವಿವಿಧ ಟ್ಯಾಬ್ಲೋಗಳು, ಚೆಂಡೆ, ವಾದ್ಯಗಳು ಇದ್ದವು.
ವಂದೇ ಮಾತರಂನ ಸಂಪೂರ್ಣ ಚರಣವನ್ನು 4,500 ವಿದ್ಯಾರ್ಥಿಗಳು ಹಾಡಿರುವುದು ವಿಶೇಷ. ಇದರಿಂದಾಗಿಯೇ ಇದು ವಿಶ್ವದಾಖಲೆಯಾಗಿದೆ. ಇದುವರೆಗೆ ಐತಿಹಾಸಿಕ ಕಾರ್ಯಕ್ರಮಗಳಲ್ಲಿ ಆಯ್ದ ಚರಣಗಳನ್ನು ಮಾತ್ರ ಹಾಡಲಾಗಿದೆ.
ಖ್ಯಾತ ಗಾಯಕರಾದ ಜೋಗಿ ಸುನೀತ, ರಮೇಶ್ ಚಂದ್ರ, ಟಿವಿ ಪರದೆಯಲ್ಲಿ ಮಿಂಚಿರುವ ಹಾಡುಗಾರರಾದ ಕೆ.ಎಸ್.ಸುರೇಖಾ, ಸುರೇಖಾ ಹೆಗ್ಡೆ, ರಜತ್ ಹೆಗ್ಡೆ, ಸುಹಾನ ಸೈಯದ್, ಲಹರಿ ಪುತ್ತೂರು, ಪ್ರಕಾಶ್ ಮಹಾದೇವನ್, ಕಿಶೋರ್ ಪೆರ್ಲ, ನಿಹಾಲ್ ತಾವ್ರೋ, ಸ್ವಾತಿ ಜೈನ್, ವೈಷ್ಣವಿ ಮಣಿಪಾಲ, ರೂಪಪ್ರಕಾಶ್, ಯಶವಂತ್, ನಿತಿನ್ ರಾಜಾರಾಮ್, ಸೌಮ್ಯ ಭಟ್, ದಿವ್ಯ ರಾಮಚಂದ್ರ, ರೂಪಾ ಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಂದೇ ಮಾತರಂ ಹಾಡಿದರು.