Thursday, January 23, 2025
ಸುದ್ದಿ

29 ಜನರಲ್ಲಿ ಮತ್ತೆ ಉಲ್ಬಣಗೊಂಡ ಡೆಂಗ್ಯೂ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ದಿನೇ ದಿನೇ ಏರಿಕೆಯಾಗುತ್ತಿದೆ. ಮಂಗಳವಾರ 29 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಸತತ ಪ್ರಯತ್ನಗಳನ್ನು ನಡೆಸುತ್ತಿವೆ. ಫಾಗಿಂಗ್, ಮನೆಮನೆ ಭೇಟಿ, ಪರಿಶೀಲನೆ ಪ್ರತಿದಿನ ನಡೆಯುತ್ತಿದೆ. ಆದಾಗ್ಯೂ ಡೆಂಗ್ಯೂ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಂಗಳವಾರ ಒಂದೇ ದಿನ 29 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಈ ಪೈಕಿ 26 ಮಂದಿ ಮಂಗಳೂರಿನವರಾದರೆ, ಓರ್ವರು ಸುಳ್ಯ ತಾಲೂಕಿನವರು. ಇಬ್ಬರು ಹೊರ ಜಿಲ್ಲೆಯವರಾಗಿದ್ದಾರೆ.
ಜುಲೈ 18ರಿಂದ ಇಲ್ಲಿವರೆಗೆ ಒಟ್ಟು 163 ಮಂದಿ ಡೆಂಗ್ಯೂ ಜ್ವರಕ್ಕಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಈ ಪೈಕಿ 19 ಮಂದಿ ಹೊರ ಜಿಲ್ಲೆಯವರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದರೆ ಅಂತಹ ಕಟ್ಟಡಗಳ ಗುತ್ತಿಗೆದಾರರು, ಮಾಲಕರಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದ್ದು, ಮಂಗಳವಾರ ಒಟ್ಟು 45 ಸಾವಿರ ದಂಡ ವಿಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೊಳ್ಳೆ ಉತ್ಪತ್ತಿಗೆ ಪೂರಕ ತಾಣವನ್ನು ಶುಚಿಗೊಳಿಸದೆ ಹಾಗೆಯೇ ಬಿಡುವ ಕಟ್ಟಡ, ಮನೆ, ಇತರ ವ್ಯಾಪಾರ ಕೇಂದ್ರಗಳಲ್ಲಿ ತಪಾಸಣೆ ವೇಳೆ ಕಂಡು ಬಂದರೆ ನಿರ್ದಾಕ್ಷಿಣ್ಯ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ರವಿವಾರದಿಂದಲೇ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಿತ್ತು. ರವಿವಾರ ಎಂಟು ಕಟ್ಟಡಗಳಿಗೆ 85 ಸಾವಿರ ರೂ. ಮತ್ತು ಸೋಮವಾರ ಎಂಟು ಕಟ್ಟಡಗಳಿಗೆ 75 ಸಾವಿರ ರೂ. ದಂಡ ವಿಧಿಸಲಾಗಿತ್ತು.

ಇದೇವೇಳೆ, ಜಿಲ್ಲೆಯಲ್ಲಿ ಕಂಡು ಬಂದಿರುವ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್ ಸೂಚಿಸಿದ್ದಾರೆ.