ಕುಂಬಳೆ: ಮೊಗ್ರಾಲ್ ಹೊಳೆಯಿಂದ ಉಕ್ಕಿ ಹರಿದ ನೆರೆನೀರು ಇನ್ನೂ ತಗ್ಗಿಲ್ಲ. ಮೊಗ್ರಾಲ್ ಗಾಂಧಿನಗರ, ನಾಂಗಿ ಕರಾವಳಿ ಪ್ರದೇಶದ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲಕಳೆಯುವಂತಾಗಿದೆ. ಈ ಪ್ರದೇಶದ ಸುಮಾರು 25ರಷ್ಟು ಮನೆಯ ಸುತ್ತ ಕೆಸರು ನೀರು ತುಂಬಿದೆ. ಕುಡಿಯುವ ನೀರಿನ ಬಾವಿಗಳಿಗೂ ನೆರೆ ನೀರು ತುಂಬಿ ಮಲಿನವಾಗಿದೆ. ಮಾತ್ರವಲ್ಲದೆ ಕೊಪ್ಪಳ ಅಂಗನವಾಡಿಯ ಸುತ್ತಲೂ ನೀರು ಆವರಿಸಿದೆ.
ಕೊಪ್ಪಳ ಆವ ಎಂಬಲ್ಲಿ ಕೆಲದಿನಗಳಿಂದ ಕಟ್ಟಿ ನಿಂತಿರುವ ನೆರೆ ನೀರನ್ನು ಸಮುದ್ರಕ್ಕೆ ಹರಿಯಲು ಕಾಲುವೆ ನಿರ್ಮಿಸಲು ಕಂದಾಯ ಮತ್ತು ಸ್ಥಳೀಯಾಡಳಿತ ಮುಂದಾಗಿಲ್ಲವೆಂಬ ಆರೋಪ ಸ್ಥಳೀಯರದು. ನೆರೆ ನೀರು ಕಟ್ಟಿನಿಂತ ಕಾರಣ, ಮನೆಯಿಂದ ಹೊರಗುಳಿಯಲು ಕಷ್ಟವಾಗಿದೆ. ಮಕ್ಕಳು ಭಯದಲ್ಲಿ ಕಾಲಕಳೆಯುವಂತಾಗಿದೆ. ಇದೇ ರೀತಿ ಮುಂದುವರಿದಲ್ಲಿ ಇನ್ನಷ್ಟು ನೆರೆ ಭೀತಿ ಕಾಡಲಿದೆ. ಆದುದರಿಂದ ನೆರೆ ನೀರು ಹರಿಯಲು ತಡೆಯಾದ, ಅಳಿವೆಯಲ್ಲಿ ಕಾಲುವೆ ನಿರ್ಮಿಸಿ ಸ್ಥಳೀಯರ ಜೀವರಕ್ಷಣೆಗೆ ಮುಂದಾಗಬೇಕಾಗಿದೆ.