ದೃಶ್ಯ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ‘ಪೆನ್ಸಿಲ್ ಬಾಕ್ಸ್’ ಚಿತ್ರವು ಅತೀ ಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಈ ಚಿತ್ರದ ಹಾಡುಗಳ ಹಕ್ಕನ್ನು ಕನ್ನಡದ ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆಯು ಖರೀದಿಸಿ, ಚಿತ್ರದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪೆನ್ಸಿಲ್ ಬಾಕ್ಸ್ ಸಿನಿಮಾದ ಹಾಡುಗಳು ರೆಡಿಯಾಗಿದ್ದು, ಇದರ ಅಡಿಯೋ ರಿಲೀಸ್ ಕಾರ್ಯಕ್ರಮ ಜುಲೈ 29ರಂದು ಮದ್ಯಾಹ್ನ 12ಗಂಟೆಗೆ ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ನಡೆಯಲಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದಲ್ಲಿ ಮೂಡಿಬಂದ ಈ ಚಿತ್ರದ ಹಾಡುಗಳನ್ನು ಸ್ವಾಮೀಜಿಗಳು ಲೋಕಾರ್ಪಣೆಗೊಳಿಸಲಿದ್ದಾರೆ. ದೃಶ್ಯ ಮೂವೀಸ್ ಅರ್ಪಿಸುವ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ ಖ್ಯಾತಿಯ ದೀಕ್ಷಾ ರೈ ಅಭಿನಯದ ಪೆನ್ಸಿಲ್ ಬಾಕ್ಸ್ ಚಿತ್ರ ಈಗಾಗಲೇ ಬಹುನಿರೀಕ್ಷೆಯನ್ನು ಹುಟ್ಟಿಸಿದೆ.
ಸಂಪೂರ್ಣವಾಗಿ ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರದಲ್ಲಿ ಒಟ್ಟು 3 ಹಾಡುಗಳಿವೆ. ಸರಿಗಮಪ ಖ್ಯಾತಿಯ ಡಾ. ಅಭಿಷೇಕ್, ವೈಷ್ಣವಿ, ಜನ್ಯ ಪ್ರಸಾದ್ ಸೇರಿದಂತೆ ಅನೇಕರು ಈ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ರಜಾಕ್ ಪುತ್ತೂರು ರಚಿಸಿರುವ ಹಾಡುಗಳಿಗೆ ಜಯಕಾರ್ತಿ ಸಂಗೀತ ಸಂಯೋಜಸಿದ್ದಾರೆ.
ಸ್ಟಾರ್ ಸುವರ್ಣ ಡಾನ್ಸ್ ಡಾನ್ಸ್ ಹಾಗೂ ಭರ್ಜರಿ ಕಾಮಿಡಿ ರಿಯಾಲಿಟಿ ಶೋ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ದೀಕ್ಷಾ ಡಿ ರೈ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಹಾಗೂ ರಮೇಶ್ ರೈ ಕುಕ್ಕುವಳ್ಳಿ ಮುಂತಾದವರ ಅಭಿನಯವಿದೆ.
‘ಚಿತ್ರದಲ್ಲಿ ಮಕ್ಕಳೇ ಹೆಚ್ಚಿರುವ ಕಾರಣಕ್ಕಾಗಿ ಮಕ್ಕಳ ಸಿನಿಮಾವೆಂದು ಕರೆಯಲಾಗುವುದಿಲ್ಲ, ಏಕೆಂದರೆ, ಇಲ್ಲಿ ಎಲ್ಲರಿಗೂ ಇಷ್ಟವಾಗುವ ಅಂಶಗಳಿವೆ. ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಕಲಿಯುತ್ತಿರುವ ಹುಡುಗಿಯೊಬ್ಬಳು ಕಾರಣಾಂತರಗಳಿಂದ ಸರ್ಕಾರಿ ಶಾಲೆಗೆ ಸೇರುತ್ತಾಳೆ. ಹಾಗೆಯೇ ಆ ಶಾಲೆಯಲ್ಲಿ ಒಂದು ಪರಿವರ್ತನೆ ತರುತ್ತಾಳೆ. ಇದು ಚಿತ್ರದ ಒನ್ ಲೈನ್ ಸ್ಟೋರಿ’ ಎಂದಿದ್ದಾರೆ ಚಿತ್ರತಂಡದವರು.