ಬೆಂಗಳೂರು: ರಾಜಧಾನಿಯಲ್ಲಿ ಡೆಂಘೀ ಸೋಂಕು ನಿರಂತರವಾಗಿ ಹೆಚ್ಚಾಗುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ರೋಗ ದೃಢ ಪಟ್ಟಿದೆ.
ಜೂನ್ ಆರಂಭದಿಂದಲೂ ನಗರದಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ವರ್ಷಾರಂಭದಿಂದ ಇಲ್ಲಿಯವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 3,393 ಮಂದಿಗೆ ಸೋಂಕು ತಗುಲಿದೆ. ವಾರದಿಂದೀಚೆಗೆ 1,136 ಮಂದಿಯಲ್ಲಿ ಸೋಂಕು ದೃಢಪಡುವ ಮೂಲಕ ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಸೋಂಕನ್ನು ಹತೋಟಿಗೆ ತರಲು ಬಿಬಿಎಂಪಿ ಆರೋಗ್ಯ ಇಲಾಖೆ ನಿರಂತರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಲಯವಾರು ಸೋಂಕಿತರ ವರದಿ ಪಡೆದು ಸೂಕ್ಷ್ಮ ಪ್ರದೇಶಗಳನ್ನು ಗುರುತು ಮಾಡಿರುವ ಬಿಬಿಎಂಪಿ ಪ್ರತಿ ವಲಯದಲ್ಲಿ ಡೆಂಘೀ ಹೆಚ್ಚು ಕಾಣಿಸಿಕೊಂಡಿರುವ ಮೊದಲ 10 ವಾರ್ಡ್‍ಗಳನ್ನು ಸೂಕ್ಷ್ಮ ಪ್ರದೇಶಗಳನ್ನಾಗಿ ಘೋಷಿಸಿ ಕಾರ್ಯಚರಣೆ ನಡೆಸುತ್ತಿದೆ.
ಈ ಪೈಕಿ ಸಿ.ವಿ.ರಾಮನ್‍ನಗರ, ಶಾಂತಿನಗರ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳು ಬರುವ ಬಿಬಿಎಂಪಿ ಪೂರ್ವ ವಲಯದಲ್ಲಿ ಹೆಚ್ಚು ಡೆಂಘೀ ಸೋಂಕು ದೃಢ ಪಟ್ಟಿವೆ. ಜನವರಿಯಿಂದ ಈವರೆಗೂ 1126 ಪ್ರಕರಣಗಳು ದಾಖಲಾಗಿವೆ.