ಮಂಗಳೂರು: ನಗರದ ಅತೀ ದೊಡ್ಡ ಪಾರ್ಕ್ ಎಂದೆನಿಸಿಕೊಂಡಿರುವ ಕದ್ರಿ ಪಾರ್ಕ್, ಇದೀಗ ಮತ್ತಷ್ಟು ಸ್ಮಾರ್ಟ್ ಆಗುತ್ತಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ನೂತನ ವೈಶಿಷ್ಟವುಳ್ಳ ಸುಮಾರು 70.5 ಲಕ್ಷ ರೂ. ವೆಚ್ಚದಲ್ಲಿ ಗೋಪುರದಲ್ಲಿ ತ್ರಿಕೋನಾಕಾರದ ಮೂರು ಸೋಲಾರ್ ಕ್ಲಾಕ್ ಅಳವಡಿಸಲಾಗಿದೆ.
ಎಸ್‍ಬಿಐಯು ತನ್ನ ಸಿಎಸ್‍ಆರ್ ಅನುದಾನದಲ್ಲಿ ನಿರ್ಮಾಣಗೊಂಡ, ತ್ರಿಕೋನಾಕಾರದ ವಿನ್ಯಾಸವುಳ್ಳ, ಅತ್ಯುತ್ತಮ ಗುಣಮಟ್ಟದ ಸೋಲಾರ್ ಕ್ಲಾಕ್ ಟವರ್ ಇದಾಗಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಕದ್ರಿ ಪಾರ್ಕ್‍ನಲ್ಲಿ ಅಳವಡಿಸಲಾಗಿದೆ. ಬೆಂಗಳೂರಿನ ಎಚ್.ಎಂ.ಟಿ ಗಡಿಯಾರ ಕಾರ್ಖಾನೆಯ ನಿವೃತ್ತ ಪ್ರಧಾನ ತಾಂತ್ರಿಕ ವ್ಯವಸ್ಥಾಪಕ ಮತ್ತು ಘಟಕ ಮುಖ್ಯಸ್ಥ ಎನ್. ಅಪ್ಪಾಜಪ್ಪ ಅವರು ಈ ಗಡಿಯಾರವನ್ನು ವಿನ್ಯಾಸ ಮಾಡಿದ್ದಾರೆ.
ಮೈಕ್ರೋ ಕಂಟ್ರೋಲರ್ ಚಿಪ್ಪಿನಿಂದ ಮತ್ತು ಕ್ವಾಟ್ರ್ಸ್ ಕ್ರಿಸ್ಟಲ್ ತರಂಗದಿಂದ ನಡೆಯುವ ಈ ಗೋಪುರ ಸೌರ ಗಡಿಯಾರವು ಹೆಚ್ಚಿನ ಸ್ಥಿರತೆಯ ಆಂದೋಲಕವನ್ನು ಹೊಂದಿದೆ. ಈ ಗಡಿಯಾರದ ಚಕ್ರಗಳನ್ನು ಡೆಲ್ ಡ್ರಿನ್ ಎಂಬ ವಸ್ತುವಿನಿಂದ ನಿರ್ಮಿಸಲಾಗಿದೆ. ಈ ಗಡಿಯಾರವು ತುಕ್ಕು ನಿರೋಧಕ, ಧೂಳು, ಮಳೆ ಮತ್ತು ಗಾಳಿಗೆ ಯಾವುದೇ ಹಾನಿಗೊಳಗಾಗುವುದಿಲ್ಲ. ವಿಶೇಷವೆಂದರೆ ಈ ಗಡಿಯಾರದ ಡಯಲ್ನಲ್ಲಿ ರೋಮನ್, ಅರೇಬಿಕ್ ಮತ್ತು ಕನ್ನಡ ಸೂಚ್ಯಾಂಕಗಳನ್ನು ಹೊಂದಿವೆ.
ಉತ್ತಮ ಗುಣಮಟ್ಟದ ಎಸ್‍ಎಸ್ 316 ಕ್ಲಿನಿಕಲ್ ಸ್ಟೀಲ್ನಿಂದ 21 ಅಡಿ ಎತ್ತರದ ಮೂರು ಕೈಗಳುಳ್ಳ ಗೋಳಾಕಾರದ ಟ್ಯೂಬಿನಲ್ಲಿ ಗಡಿಯಾರವನ್ನು ನಿರ್ಮಿಸಲಾಗಿದೆ. ಈ ಗಡಿಯಾರವು ಹಗಲು ಹೊತ್ತಿನಲ್ಲಿ ಸೂರ್ಯನ ಬೆಳಕಿನಿಂದ ಮತ್ತು ರಾತ್ರಿ ವೇಳೆ ಲಿಥಿಯಂ ಬ್ಯಾಟರಿಯಿಂದ ಕಾರ್ಯನಿರ್ವಹಿಸುತ್ತದೆ. ಯಾವುದೇ ಸಮಯದಲ್ಲೂ ನಿಖರ ಸಮಯಕ್ಕೆ 5 ವರ್ಷಗಳ ಕಾಲದ ದತ್ತಾಂಶ ಸಂಗ್ರಹಿಸಿಟ್ಟುಕೊಂಡಿರುವ ಸಾಮಥ್ರ್ಯವನ್ನು ಹೊಂದಿದೆ.
ಪ್ರತೀ ದಿನ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸೋಲಾರ್ ಗಡಿಯಾರದ ಡಯಲ್ನಲ್ಲಿ ದಿನಕ್ಕೊಂದು ಬಣ್ಣದಂತೆ ಪಿಂಕ್, ಬಿಳಿ, ಕೆಂಪು, ಹಸುರು, ಹಳದಿ, ತಿಳಿ ನೀಲಿ, ನೀಲಿ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಗಂಟೆಗೊಮ್ಮೆ ಸೂಚನ ಶಬ್ದ ಮಾಡುವ ವ್ಯವಸ್ಥೆಯನ್ನು ಹೊಂದಿದ್ದು, ಸುಮಾರು 2 ಕಿ.ಮೀ.ವರೆಗೆ ಶಬ್ದ ಕೇಳಿಸಬಹುದಾದ ತಂತ್ರಜ್ಞಾನ ಹೊಂದಿದೆ.
ನಗರದ ಕದ್ರಿ ಪಾರ್ಕ್‍ಗೆ ಬರುವ ಮಂದಿಗೆ ಅನುಕೂಲವಾಗಲೆಂದು ಎಸ್‍ಬಿಐಯು ತನ್ನ ಸಿಎಸ್‍ಆರ್ ಅನುದಾನದಿಂದ ಸೋಲಾರ್ ಕ್ಲಾಕ್ ಟವರ್ ಅನ್ನು ಅಳವಡಿಸಿದೆ. ಮುಂದಿನ ದಿನಗಳಲ್ಲಿ ಕದ್ರಿ ಪಾರ್ಕ್ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ.
ಉತ್ತಮ ತಂತ್ರಜ್ಞಾನ ಮತ್ತು ಉತ್ಕೃಷ್ಟ ಗುಣಮಟ್ಟದ ಸೋಲಾರ್ ಗೋಪುರ ಗಡಿಯಾರ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಕದ್ರಿ ಪಾರ್ಕ್‍ನಲ್ಲಿ ಅಳವಡಿಸಲಾಗಿದೆ.