ನವದೆಹಲಿ: ಕನ್ನಡ ಸೇರಿದಂತೆ ದೇಶದ 9 ಸ್ಥಳೀಯ ಭಾಷೆಗಳಲ್ಲಿ ಸುಪ್ರೀಂಕೋರ್ಟ್ ತೀರ್ಪುಗಳನ್ನು ಪ್ರಕಟಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೆಲ ದಿನಗಳ ಹಿಂದಷ್ಟೇ ಈ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಯಡಿ ಕನ್ನಡ, ತೆಲುಗು, ತಮಿಳು, ಅಸ್ಸಾಮಿ, ಬೆಂಗಾಲಿ, ಹಿಂದಿ, ಮರಾಠಿ, ಒಡಿಯಾ, ಉರ್ದು ಭಾಷೆಗಳಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪುಗಳು ಪ್ರಕಟವಗಲಿದ್ದು, ಇದರಿಂದ ಸ್ಥಳೀಯ ಜನತೆಗೆ ಕಾನೂನಿನ ಅರಿವು ಹೆಚ್ಚಲು ಅನುಕೂಲವಾಗಲಿದೆ. ಈ ಯೋಜನೆಗೆ ಕೃತಕ ಬುದ್ಧಿಮತ್ತೆ ಸಮಿತಿ ರಚಿಸಲಾಗಿದ್ದು, ಅನುವಾದ ಕಾರ್ಯ ಪ್ರಗತಿಯಲ್ಲಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ತಿಳಿಸಿದ್ದಾರೆ.
ಕಾರ್ಮಿಕ ಕಾನೂನುಗಳು, ಭೂಸ್ವಾಧೀನ ಮತ್ತು ಪರಿಹಾರ ಮಾರ್ಗಗಳು, ಹಣಕಾಸಿನ ವ್ಯವಹಾರಗಳು, ಧಾರ್ಮಿಕ ಮತ್ತು ದತ್ತಿ ಸಂಬಂಧಿತ ವಿಚಾರಗಳು ಸೇರಿದಂತೆ ಅನೇಕ ವರ್ಗದಡಿ ಸುಪ್ರೀಂಕೋರ್ಟ್ ತೀರ್ಪುಗಳು ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗಲಿವೆ ಎಂದು ಅವರು ಹೇಳಿದ್ದಾರೆ.