ಸುಳ್ಯ: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ, ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ. ಇನ್ನೊಂದೆಡೆ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ಒಲಿದೀತೆ ಎಂಬ ಕುರಿತು ಚರ್ಚೆಗಳು ಆರಂಭವಾಗಿವೆ.
ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕಾಗಿ ಬಂದಾಗ ಈ ಬಾರಿ ಸಚಿವ ಸ್ಥಾನ ಗ್ಯಾರಂಟಿ ಎಂದು ಸುಳ್ಯದ ಜನತೆ ನಂಬಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸರ್ಕಾರದಲ್ಲೂ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ.
ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಶೆಟ್ಟರ್ ಸರ್ಕಾರ ಅಧಿಕಾರಕ್ಕೆ ಏರಿದಾಗ ಅಂಗಾರರಿಗೆ ಸಚಿವ ಸ್ಥಾನ ನೀಡದಿರುವುದನ್ನು ವಿರೋಧಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿಯ ಎಲ್ಲ ಪದಾಧಿಕಾರಿಗಳು ರಾಜೀನಾಮೆ ನೀಡಿ ಒಂದು ತಿಂಗಳ ಕಾಲ ಬಿಜೆಪಿ ಕಚೇರಿಯನ್ನೇ ಮುಚ್ಚಿದ್ದ ಪ್ರಸಂಗವೂ ನಡೆದಿತ್ತು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅಂಗಾರ ಸಚಿವರಾಗಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು. ಆದರೆ ಇದುವರೆಗೂ ಸಚಿವ ಭಾಗ್ಯ ಒಲಿದು ಬರಲಿಲ್ಲ. 20 ತಿಂಗಳು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಂದರ್ಭ ಬೇಡಿಕೆ ಇದ್ದರೂ ಅವಕಾಶ ಇರಲಿಲ್ಲ.
ಇದೀಗ ರಾಜಕೀಯ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಂಗಾರ ಅವರಿಗೆ ಸಚಿವ ಸ್ಥಾನದ ಕುರಿತು ಚರ್ಚೆ ನಡೆಯುತ್ತಿದೆ. ಸತತ ಆರು ಬಾರಿ ಶಾಸಕರಾಗಿರುವ ಅಂಗಾರ ಈ ಬಾರಿಯೂ ಸಚಿವಗಿರಿಯಿಂದ ವಂಚಿತರಾಗುತ್ತಾರಾ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.