ಮಂಗಳೂರು: ರಾಜ್ಯದಲ್ಲಿ ಅತೃಪ್ತ ಶಾಸಕರ ಖರೀದಿಯೇ ಬಹುದೊಡ್ಡ ಹಗರಣವಾಗಿದ್ದು, ಅದನ್ನು ಅದೇ ಅತೃಪ್ತ ಶಾಸಕರು ಮುಂದಿನ ಮೂರು ತಿಂಗಳಲ್ಲಿ ಬಹಿರಂಗ ಪಡಿಸಲಿದ್ದಾರೆ. ಶಾಸಕರ ಖರೀದಿಗಾಗಿ ಬಿಜೆಪಿಯು ಕನಿಷ್ಠ 1,000 ಕೋ.ರೂ. ಖರ್ಚು ಮಾಡಿರಬಹುದು ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಹಾಗೂ ಪಕ್ಷದಲ್ಲಿ ಕೆಲವೊಮ್ಮೆ ಅಭಿಪ್ರಾಯ ಭೇದಗಳು ಸಹಜ. ಆದರೆ ಅದನ್ನೇ ಬಳಸಿಕೊಂಡ ಬಿಜೆಪಿಯು ಶಾಸಕರ ಖರೀದಿ ಮಾಡಿದೆ. ಕೇಂದ್ರ ಸರಕಾರ ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸಲು ಹೊರಟಿದ್ದು, ದೇಶ, ರಾಜ್ಯಕ್ಕೆ ಮಾರಕವಾಗಲಿದೆ.
ರಾಜ್ಯದಲ್ಲಿ ನಗರಾಭಿವೃದ್ಧಿ, ವಸತಿ ಖಾತೆ ಸಚಿವನಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎಂಬ ಸಂತೋಷವಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಕ್ಷೇತ್ರವೊಂದಕ್ಕೆ 6 ಕೋಟಿ ರೂ. ಬಂದಿದ್ದು ಇದೇ ಮೊದಲು ಎಂದರು.