ನವದೆಹಲಿ: ಶಿಕ್ಷಕರ ತರಬೇತಿಗಾಗಿ 4 ವರ್ಷದ ಸಮಗ್ರ ಬಿ.ಇಡಿ ಕೋರ್ಸ್ ಈ ವರ್ಷದಿಂದಲೇ ಆರಂಭವಾಗಿದೆ. ರಾಜ್ಯ ಸಭೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃಧ್ದಿ ಸಚಿವ ರಮೇಶ್ ಪೋಖ್ರಿಯಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಿಕ್ಷಕರ ತರಬೇತಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಈ ಕೋರ್ಸ್‍ನ್ನು ಬದಲಾವಣೆ ಮಾಡಲಾಗಿದೆ. ಪ್ರಸಕ್ತ 2 ವರ್ಷದ ಬಿ.ಇಡಿ ಕೋರ್ಸ್ ಬದಲಿಗೆ 4 ವರ್ಷದ ಸಮಗ್ರ ಬಿಎ-ಬಿ.ಇಡಿ, ಬಿಎಸ್.ಸಿ-ಬಿ.ಇಡಿ, ಹಾಗೂ ಬಿ.ಕಾಂ-ಬಿ.ಇಡಿ ಕೋರ್ಸ್‍ಗಳನ್ನು ನಡೆಸಲಾಗುವುದು. ಈ ಕೋರ್ಸ್‍ಗೆ ಅಗತ್ಯವಿರುವ ಪಠ್ಯ ರೂಪಿಸಲಾಗಿದೆ. ಈ ಬಗ್ಗೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೋಖ್ರಿಯಾಲ್ ತಿಳಿಸಿದ್ದಾರೆ.
ಈ ರೀತಿಯ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಳಿತಾಯದ ಜೊತೆಗೆ ಉತ್ತಮ ತರಬೇತಿ ದೊರೆಯಲಿದೆ.
ರಾಷ್ಡ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳ್ಳುವ ಮುನ್ನವೇ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿರುವ ನೂತನ ಶಿಕ್ಷಣ ನೀತಿಯಲ್ಲಿ ಆ ಅಂಶಗಳು ಪ್ರಸ್ತಾಪವಾಗಿದೆ.
ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಎಲ್ಲಾ ಶಿಕ್ಷಕರಿಗೆ ಬಿ.ಇಡಿ ತರಬೇತಿ ಕಡ್ಡಾಯವಾಗಿದೆ. ಹೀಗಾಗಿ ತರಬೇತಿ ಪಡೆಯದ ಶಿಕ್ಷಕರು 2019ರ ಆಗಸ್ಟ್ 31ರೊಳಗೆ ನೊಂದಣಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸಭೆಗೆ ಪೋಖ್ರಿಯಾಲ್ ತಿಳಿಸಿದ್ದಾರೆ.