ಲಖನೌ: ಮಾನವ-ಪ್ರಾಣಿ ಸಂಘರ್ಷ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಂಘರ್ಷದ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದು, ಇಲ್ಲಿನ ಪಿಲಿಬಿತ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬಳಿ ಗ್ರಾಮಸ್ಥರ ಗುಂಪೊಂದು ಹರೆಯದ ಹೆಣ್ಣು ಹುಲಿಯೊಂದನ್ನು ಮನಬಂದಂತೆ ಥಳಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಗುರುವಾರ ನಸುಕಿನ ಜಾವ ಈ ಘಟನೆ ನಡೆದಿರುವುದಾಗಿ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 31 ಜನರ ವಿರುದ್ಧ ಅರಣ್ಯ ಅಧಿಕಾರಿಗಳು ಎಫ್ಐಆರ್ ದಾಖಲು ಮಾಡಿದ್ದು, 12 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಪ್ರದೇಶದ ವಿಭಾಗ ಸಂಖ್ಯೆ 12ರ ಬಳಿಯ ಮತೈನಾ ಗ್ರಾಮದ ಬಳಿ ಗ್ರಾಮಸ್ಥನೊಬ್ಬನ ಮೇಲೆ ಹುಲಿ ದಾಳಿ ಮಾಡಿತ್ತು ಎನ್ನಲಾಗಿದೆ. ಇದನ್ನು ಕಂಡು ಇನ್ನುಳಿದ ಗ್ರಾಮಸ್ಥರು ಹೆಣ್ಣು ಹುಲಿಯನ್ನು ಸುತ್ತುವರಿದು ಕ್ರೂರವಾಗಿ ಥಳಿಸಿದ್ದಾರೆ. ದಾಳಿ ನಡೆದ ಮೂರು ಗಂಟೆಯ ಬಳಿಕ ನಮ್ಮ ಅರಣ್ಯ ಅಧಿಕಾರಿಗಳು ಸ್ಥಳವನ್ನು ತಲುಪಿದಾಗ ಆಗಾಗಲೇ ಹುಲಿ ಕುಂಟುಕೊಂಡು ಅರಣ್ಯದೊಳಗಡೆ ತೆರಳಿತ್ತು. ಬಳಿಕ ಅದಕ್ಕೆ ಚಿಕಿತ್ಸೆ ಕೊಡಿಸಲು ಹುಡುಕಾಡಿದರೂ ಹುಲಿ ಅಷ್ಟರಲ್ಲಾಗಲೇ ಸಾವಿಗೀಡಾಗಿತ್ತು ಎಂದು ರಾಜಾ ಮೋಹನ್ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಖಚಿತಪಡಿಸಿದ ಪಿಲಿಬಿತ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕ ರಾಜಾ ಮೋಹನ್, ಹೆಣ್ಣು ಹುಲಿಗೆ 5 ವರ್ಷ ವಯಸ್ಸಾಗಿದೆ. ಡ್ಯೂರಿಯಾ ಪ್ರದೇಶದ ಬಳಿ ಗ್ರಾಮಸ್ಥರು ಹುಲಿಯ ಮೇಲೆ ದಾಳಿ ಮಾಡಿದ್ದಾರೆ. ಹುಲಿಯ ಕಳೇಬರವನ್ನು ಗುರುವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಹುಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ಹೇಗೆ ಸಾವಿಗೀಡಾಗಿದೆ ಎಂಬುದು ದೃಢಪಟ್ಟಿದೆ. ದಾಳಿಗೆ ಒಳಗಾದ ಹುಲಿಯ ಪಕ್ಕೆಲುಬುಗಳು ಮುರಿತಕ್ಕೆ ಒಳಗಾಗಿತ್ತು. ಶ್ವಾಸಕೋಸ ತೂತಾಗಿತ್ತು. ಕಾಲಿನ ಮೂಳೆಗಳು ಮುರಿದಿತ್ತು. ಭರ್ಚಿ ಹಾಗೂ ಚೂಪಾದ ಸಾಧನಗಳಿಂದ ದಾಳಿ ಮಾಡಿದ್ದರಿಂದ ಹುಲಿಯ ಸಂಪೂರ್ಣ ದೇಹ ರಕ್ತಸಿಕ್ತ ಗಾಯಗಳಿಂದ ಕೂಡಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ತಂಡದಲ್ಲಿದ್ದ ಪಶುವೈದ್ಯರು ತಿಳಿಸಿದ್ದಾರೆ.