ಕಡಬ: ಹಳೆನೇರೆಂಕಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟದ ಮೈದಾನದ ಒಂದು ಭಾಗವನ್ನು ಗದ್ದೆ ಬೇಸಾಯಕ್ಕೆ ಮೀಸಲಿಟ್ಟು ವಿದ್ಯಾರ್ಥಿಗಳಿಗೆ ಕೃಷಿ ಪಾಠ ನಡೆಸುತ್ತಿರುವುದು ವಿಶೇಷ.
ಹಳೆನೇರೆಂಕಿ ಶಾಲೆಯಲ್ಲಿ ಗದ್ದೆ ಬೇಸಾಯ, ತೆನೆ ಹಬ್ಬ, ಹೊಸಕ್ಕಿ ಊಟ ಮುಂತಾದ ತುಳುನಾಡ ಆಚರಣೆಗಳನ್ನು ಮೆಲುಕು ಹಾಕುವ ಪ್ರಾಯೋಗಿಕ ಪ್ರಯತ್ನ ಮೂರು ವರ್ಷಗಳಿಂದ ನಡೆಯುತ್ತಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉಳುಮೆ, ನೇಜಿ ನಾಟಿ ಮಾಡಿ ಕೊನೆಗೆ ಭತ್ತದ ಪೈರನ್ನು ಕಟಾವು ಮಾಡುವ ತನಕ ಭತ್ತ ಬೇಸಾಯದ ಇಡೀ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ.
ಗದ್ದೆ ಬೇಸಾಯವಲ್ಲದೆ ಇಲ್ಲಿನ ವಿದ್ಯಾರ್ಥಿಗಳು ಶಾಲಾ ಕೈತೋಟದಲ್ಲಿ ತರಕಾರಿಯನ್ನೂ ಬೆಳೆಯುತ್ತಿದ್ದಾರೆ. ಸ್ಥಳೀಯ ಶಿಕ್ಷಣ ಪ್ರೇಮಿಗಳು ಹಾಗೂ ಹೆತ್ತವರ ಸಹಯೋಗದಲ್ಲಿ ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಾದ ತರಕಾರಿ ಬೆಳೆಯಲಾಗುತ್ತಿದೆ. ಬೆಳೆಗಳ ಪೋಷಣೆಯ ಸಂಪೂರ್ಣ ಹೊಣೆಯನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದಾರೆ.
ಮುಖ್ಯ ಶಿಕ್ಷಕ ಸಾಂತಪ್ಪ ಗೌಡ ಹಾಗೂ ಇತರ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಲೆಗೆ ಮುಂಡಾಸು, ವಿದ್ಯಾರ್ಥಿನಿಯರು ಅಡಿಕೆ ಹಾಳೆಯ ಮುಟ್ಟಾಲೆ ಧರಿಸಿ ಸಾಂಪ್ರದಾಯಿಕವಾಗಿ ಗದ್ದೆಗಿಳಿದು ನೇಜಿ ನಾಟಿ ಮಾಡಿ ಪಕ್ಕಾ ಕೃಷಿಕರಂತೆ “ಓ ಬೇಲೆ’ ಪಾಡ್ದಾನವನ್ನ ಹಾಡಿ ಖುಷಿಪಟ್ಟರು. ಗದ್ದೆಯ ಎಲ್ಲ ಕೆಲಸವನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಶಾಲೆಯಲ್ಲಿ ಬೆಳೆದ ತರಕಾರಿ, ಭತ್ತದ ಪೈರಿಗೆ ನವಿಲುಗಳು ದಾಳಿ ನಡೆಸುವುದು ನಮಗೆ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ಶಿಕ್ಷಕ ನವೀನ್.