ಬೆಂಗಳೂರು: ‘ಅಪಘಾತಗಳಿಂದ ಉಂಟಾಗುವ ಪ್ರಾಣಹಾನಿ ತಪ್ಪಿಸುವ ಉದ್ದೇಶದಿಂದ ಬೆಂಗಳೂರು ನಗರ ಸಂಚಾರ ಪೊಲೀಸರು ‘ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿಗೆ ತರಲು ನಿರ್ಧರಿಸಿದ್ದಾರೆ.
ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದ ಉಂಟಾಗುತ್ತಿರುವ ಜೀವ ಹಾನಿ, ಗಂಭೀರ ಗಾಯಗಳಿಂದ ಬಳಲುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ನಿಯಮ ಪಾಲನೆಯಾಗಲು ‘ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿಗೆ ಪೊಲೀಸರು ಮುಂದಾಗಿದ್ದಾರೆ. ಈ ಕುರಿತ ಪ್ರಕ್ರಿಯೆಗಳನ್ನು ಸಂಚಾರ ಪೊಲೀಸ್ ವಿಭಾಗ ಸದ್ದಿಲ್ಲದೆ ಆರಂಭಿಸಿದೆ.
ಒಂದು ವೇಳೆ ನಿಯಮ ಜಾರಿಯಾದರೆ ದೆಹಲಿಯ ನೋಯ್ಡಾ ಹಾಗೂ ಉತ್ತರಪ್ರದೇಶದ ಆಲಿಘರ್ ನಗರಗಳ ಬಳಿಕ ಈ ನಿಯಮ ಜಾರಿಗೊಳಿಸಿದರೆ ಮೂರನೇ ನಗರ ಎಂಬ ಕೀರ್ತಿಗೆ ಬೆಂಗಳೂರು ಪಾತ್ರವಾಗಲಿದೆ.
ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ನೀಡದಂತೆ ಬೆಂಗಳೂರು ನಗರದ ಪೆಟ್ರೋಲ್ ಬಂಕ್‍ಗಳ ಮಾಲೀಕರ ಬಳಿ ಸಭೆ ನಡೆಸಬೇಕಿದೆ. ಅವರ ಸಹಕಾರವೂ ಇದಕ್ಕೆ ಮುಖ್ಯವಾಗಲಿದೆ. ಈ ಕುರಿತು ಸಭೆಗಳನ್ನು ನಡೆಸಿ ಮುಂದಿನ ತೀರ್ಮಾನಗಳನ್ನು ನಿರ್ಧರಿಸಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.