ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‍ನಲ್ಲಿ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಶನಿವಾರ ಅಧಿಕೃತ ಮೂಲಗಳು ತಿಳಿಸಿವೆ.
ವದಂತಿಗಳನ್ನು ಹರಡದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಶೋಪಿಯಾನ್‍ನಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಶೋಪಿಯಾನ್‍ನ ಕೆಲವೆಡೆ ಘರ್ಷಣೆ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರಾಷ್ಟ್ರೀಯ ರೈಫಲ್ಸ್ (ಆರ್ ಆರ್) ತುಕಡಿ, ಸಿಆರ್‍ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್‍ನ ವಿಶೇಷ ಕಾರ್ಯಾಚರಣಾ ಪಡೆ, ಶೋಪಿಯಾನ್‍ನ ಮುಖ್ಯ ಪಟ್ಟಣ ಬೋಬಜಾರ್ನಲ್ಲಿ ಶುಕ್ರವಾರ ತಡರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿವೆ.
ಪಟ್ಟಣದ ಎಲ್ಲಾ ಒಳಬರುವ ಮತ್ತು ಹೊರಹೋಗುವ ಮಾರ್ಗಗಳನ್ನು ಬಂದ್ ಮಾಡಿ ಮನೆ ಮನೆ ಶೋಧ ನಡೆಸಲಾಯಿತು. ಆದಾಗಿಯೂ ಭದ್ರತಾ ಪಡೆ ಗ್ರಾಮದ ಒಂದು ನಿರ್ದಿಷ್ಟ ಸ್ಥಳ ತಲುಪಿದಾಗ ಅಡಗಿ ಕುಳಿತಿದ್ದ ಉಗ್ರರು ಸ್ವಯಂ ಚಾಲಿತ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ.
ತಕ್ಷಣ ಭದ್ರತಾ ಪಡೆ ಕೂಡ ಪ್ರತಿದಾಳಿ ನಡೆಸಿದ್ದು, ಇದುವರೆಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಅಲ್ಲಿಂದ ಕೊನೆಯ ಬಾರಿಗೆ ವರದಿ ಬಂದಾಗಲೂ ಕಾರ್ಯಾಚರಣೆ ನಡೆಯುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಯಾವುದೇ ರೀತಿಯ ಪ್ರತಿಭಟನೆಯನ್ನು ಹತ್ತಿಕ್ಕಲು ಪಟ್ಟಣದಾದ್ಯಂತ ಹೆಚ್ಚುವರಿ ಪೊಲೀಸ್ ಪಡೆ ಹಾಗೂ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.