ಬೆಂಗಳೂರು : ರಾಜ್ಯದ ಶಿಕ್ಷಣ ಇಲಾಖೆಯು ನಿರುದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, 2019-20ನೇ ಶೈಕ್ಷಣಿಕ ಸಾಲಿನಲ್ಲಿ ನಾನಾ ಕಾರಣಗಳಿಂದ ಸರ್ಕಾರ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಸಹ ಶಿಕ್ಷಕರ ಹುದ್ದೆಗಳಿಗೆ ಅಗತ್ಯತೆಗೆ ಅನುಗುಣವಾಗಿ 3,453 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿದೆ.
ಬೆಂಗಳೂರು ವಿಭಾಗದಲ್ಲಿ 589, ಮೈಸೂರು ವಿಭಾಗದಲ್ಲಿ 775, ಬೆಳಗಾವಿ ವಿಭಾಗದಲ್ಲಿ 1017 ಹಾಗೂ ಕಲಬುರಗಿ ವಿಭಾಗದಲ್ಲಿ 1072 ಸೇರಿದಂತೆ ಒಟ್ಟು 3453 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಶಿಕ್ಷಣ ಅಧೀನ ಕಾರ್ಯದರ್ಶಿ ವಿ.ಟಿ.ರಾಜಶ್ರೀ ಆದೇಶ ಹೊರಡಿಸಿದ್ದಾರೆ.
ಇನ್ನು ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸಂಬಂಧ ಪಟ್ಟ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದ್ದು, ಅತಿಥಿ ಶಿಕ್ಷಕರ ತಾಲೂಕುವಾರು ಸಂಖ್ಯೆ ಹಾಗೂ ಅನುದಾನದ ವಿವರಗಳೊಂದಿಗೆ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಅನುದಾನ ಬಿಡುಗಡೆ ಮಾಡಲು ಮರು ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲ ಜಿಲ್ಲೆಗಳ ಡಿಡಿಪಿಐಗಳಿಗೆ ಸೂಚಿಸಲಾಗಿದೆ.