ಕೋಲ್ಕತಾ: ಪಶ್ಚಿಮ ಬಂಗಾಲ ಬಳಿ ಗಡಿಯಲ್ಲಿ ಬಾಂಗ್ಲಾದೇಶದ ಜಾನುವಾರು ಕಳ್ಳಸಾಗಣೆದಾರರು ತಮ್ಮ ಕುಕೃತ್ಯಕ್ಕೆ ಅತ್ಯಂತ ಹೇಯ ಕ್ರಮ ಅನುಸರಿಸುತ್ತಿದ್ದಾರೆ. ಇತ್ತೀಚೆಗೆ ಕಳ್ಳಸಾಗಣೆದಾರರು ಜಾನುವಾರುಗಳ ಕತ್ತಿಗೆ ಸ್ಫೋಟಕಗಳನ್ನು ಕಟ್ಟಿ, ನದಿಯಲ್ಲಿ ತೇಲಿಬಿಡುತ್ತಿದ್ದಾರೆ. ಈ ಜಾನುವಾರುಗಳನ್ನು ರಕ್ಷಿಸಲು ಹೋಗುವ ಬಿಎಸ್‍ಎಫ್ ಸಿಬ್ಬಂದಿ ಸ್ವಲ್ಪ ಎಚ್ಚರ ತಪ್ಪಿದರೂ ಜಾನುವಾರು ಹಾಗೂ ಸಿಬ್ಬಂದಿಗೆ ಪ್ರಾಣಾಪಾಯ ಖಚಿತ.
ಬಾಳೆ ಗಿಡಗಳಿಗೆ ಉದ್ದನೆಯ ಹಗ್ಗ ಕಟ್ಟಿ ಅದನ್ನು ಜಾನುವಾರುಗಳಿಗೆ ಕಟ್ಟಲಾಗುತ್ತದೆ. ಜೊತೆಗೆ ಜಾನುವಾರುಗಳ ಕತ್ತಿಗೆ ಸುಧಾರಿತ ಸ್ಫೋಟಕವನ್ನು ಕಟ್ಟಿ, ಜಾನುವಾರುಗಳನ್ನು ಸಣ್ಣ ತೊರೆಗಳಲ್ಲಿ ನೂಕಿಬಿಡಲಾಗುತ್ತದೆ. ಬಾಂಗ್ಲಾ ಗಡಿ ದಾಟಿ ಅನಂತರ ಬಾಂಗ್ಲಾದೇಶದ ಭಾಗದಲ್ಲಿ ಜಾನುವಾರುಗಳನ್ನು ಹಿಡಿದು ಕಸಾಯಿಖಾನೆಗೆ ಸಾಗಿಸಲಾಗುತ್ತದೆ. ಪಶ್ಚಿಮ ಬಂಗಾಲದ ಮಾಲ್ಡಾ, ಮುರ್ಶಿದಾಬಾದ್, ನಾರ್ತ್ 24 ಪರಗಣ ಹಾಗೂ ನಾಡಿಯಾದಲ್ಲಿ ಇಂಥವು ಭಾರೀ ಪ್ರಮಾಣದಲ್ಲಿ ಕಂಡುಬಂದಿವೆ. ಬುಧವಾರದಿಂದ ಈವರೆಗೆ 365 ಜಾನುವಾರುಗಳನ್ನು ಬಿಎಸ್‍ಎಫ್ ಸಿಬಂದಿ ರಕ್ಷಿಸಿದ್ದಾರೆ.