ಬೆಂಗಳೂರು: ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ್ದಾರೆ. 105 ಶಾಸಕರು ಸರ್ಕಾರದ ಪರ ಬೆಂಬಲ ವ್ಯಕ್ತಪಡಿಸಿದ ಪರಿಣಾಮ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕೃತವಾಗಿ ಕರ್ನಾಟಕದ ಚುಕ್ಕಾಣಿ ಹಿಡಿದಿದೆ.
ಕರ್ನಾಟಕ ವಿಧಾನಸಭೆಯ ಒಟ್ಟು ಸಂಖ್ಯಾಬಲ 224 ಆಗಿದ್ದು 17 ಮಂದಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. 105 ಶಾಸಕರ ಬೆಂಬಲ ಹೊಂದಿದ್ದರಿಂದ ಬಿಎಸ್‍ವೈ ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಬಹುಮತ ಸಾಬೀತು ಪಡಿಸಲು 105 ಶಾಸಕರ ಬೆಂಬಲ ಬೇಕಿತ್ತು. ಧ್ವನಿಮತದ ಮೂಲಕ ಯಡಿಯೂರಪ್ಪ ಸರ್ಕಾರ ಪಾಸ್ ಆಗಿದ್ದು ಮುಂದಿನ 6 ತಿಂಗಳು ಯಾವುದೇ ಸಮಸ್ಯೆ ಇಲ್ಲದೇ ಅಧಿಕಾರ ನಡೆಸಬಹುದು.
ಸದನದಲ್ಲಿ ಮಾತನಾಡಿದ ಯಡಿಯೂರಪ್ಪ, ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದೇನೆ. ಜನ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದುಕೊಂಡಿದ್ದೇನೆ. ನಮ್ಮ ಸರ್ಕಾರಕ್ಕೆ ವಿರೋಧ ಪಕ್ಷಗಳ ಸಹ ಬೆಂಬಲ ನೀಡಬೇಕು ಎಂದು ಕೇಳಿಕೊಂಡರು. ನನ್ನನ್ನು ವಿರೋಧಿಸಿದರೂ ನಾನು ದ್ವೇಷ ಮಾಡುವುದಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಮಾತನಾಡಿ, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ದೀರ್ಘ ಕಾಲ ಚರ್ಚೆ ನಡೆದಿದೆ. ಹೀಗಾಗಿ ಜಾಸ್ತಿ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.