ಮಂಗಳೂರು : ಯುವ ಜನಾಂಗದಲ್ಲಿ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು, ಸದೃಢ ಸಮಾಜ ನಿರ್ಮಾಣವಾಗಬೇಕು ಎಂಬ ಮಹಾದಾಸೆಯಿಂದ, ಕಳೆದ 34 ತಿಂಗಳ ಹಿಂದೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹದೊಂದಿಗೆ, ಜನ ಸೇವೆಯೇ ಜನಾರ್ದನ ಸೇವೆ ಎಂಬ ಉದ್ದೇಶದೊಂದಿಗೆ ಹುಟ್ಟಿಕೊಂಡ ಒಂದು ಸಂಸ್ಥೆಯೇ, ತುಳುನಾಡ ಪೊರ್ಲು ಸೇವಾ ಟ್ರಸ್ಟ್. ಈ 34 ತಿಂಗಳ ಸೇವಾ ಪಯಣದಲ್ಲಿ, ಸುಮಾರು 25 ಲಕ್ಷ ಅಧಿಕ ನೆರವನ್ನು ಈ ಸಮಾಜದ ಅಶಕ್ತರಿಗೆ ನೀಡುತ್ತಾ ಬಂದಿದ್ದು, ಇಂದು ತನ್ನ 35ನೇ ತಿಂಗಳ ಮಾಸಿಕ ಸೇವಾ ಪಯಣದಲ್ಲಿ 2 ಅಶಕ್ತ ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ ಮಾಡಿತು.
35ನೇ ತಿಂಗಳ ಮಾಸಿಕ ಸೇವಾ ಯೋಜನೆಯ ಫಲಾನುಭವಿಗಳಾದ, ಬೆನ್ನೆಲುಬು ಸಮಸ್ಯೆಯಿಂದ ಬಳಲುತ್ತಿರುವ ಮಂಗಳೂರು ತಾಲೂಕಿನ ಪದವಿನಂಗಡಿ ಮುಗ್ರೋಡಿ ನಿವಾಸಿ, ಶೋಭಾ ಸುಕುಮಾರ ದೇವಾಡಿಗ ದಂಪತಿಗಳ ಪುತ್ರಿ ನಿಶ್ಮಿತಾರವರ ಚಿಕಿತ್ಸೆಗೆ ರೂ.25,000 ಚೆಕ್ ಮತ್ತು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ, ಕಾಸರಗೋಡು ಮಂಜೇಶ್ವರ ತಾಲೂಕಿನ ಕುಡಾಲು ಮೇರ್ಕಳ ಮಂಡೆಕಾಪುವಿನ, ಸುಂದರ ನಾಯಕ್ ಚಿಕಿತ್ಸೆಗೆ ರೂ. 25,000 ಚೆಕ್ ಅನ್ನು, ಉಪ ಸಹಾಯಕ ಪೊಲೀಸ್ ಆಯುಕ್ತರಾದ ಎಂ.ಎ ಉಪಾಸೆಯವರ ಸಮ್ಮುಖದಲ್ಲಿ, ಸಹಾಯಕ ಪೋಲಿಸ್ ಆಯುಕ್ತರ ಕಚೇರಿ ಸಿ.ಎ.ಆರ್ ಮಂಗಳೂರು ಇಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.