ನಮಗೆ ಪ್ರಚೋದಿಸಿದವರ ಸುಮ್ನೆ ಬಿಡಲ್ಲ, ಬೆಂಗಳೂರಿಗೆ ಬಂದು ಬಂಡವಾಳ ಬಿಚ್ಚಿಡುತ್ತೇವೆ: ಅನರ್ಹ ಶಾಸಕ ಮುನಿರತ್ನ – ಕಹಳೆ ನ್ಯೂಸ್
ಅಪ್ಪ – ಮಕ್ಕಳದು ಜಾಸ್ತಿ ಆಯ್ತು, ಈ ಸಮ್ಮಿಶ್ರ ಸರ್ಕಾರ ತೆಗಿಬೇಕು ಎಂದವರೇ ಈಗ ಈ ರೀತಿ ಮಾಡಿದ್ದಾರೆ. ನಮಗೆ ಪ್ರಚೋದನೆ ನೀಡಿ ಈಗ ಒಳ್ಳೆಯವರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಬಿಡಲ್ಲ, ಬೆಂಗಳೂರಿಗೆ ಬಂದು ಬಂಡವಾಳ ಬಯಲಿಗೆಳೆಯುತ್ತೇವೆ ಎಂದು ಅನರ್ಹ ಶಾಸಕ ಮುನಿರತ್ನ ಗುಡುಗಿದ್ದಾರೆ.
ನಮಗೆ ಮೊದಲೇ ಹೇಳಿದ್ದರು, ರಾಜೀನಾಮೆ ನೀಡಿದಾಗ ನಿಮ್ಮ ಜೊತೆಗಿದ್ದೇವೆ ಎಂದವರದೆಲ್ಲಾ ನಾಟಕ, ಸುಳ್ಳು ಹೇಳುತ್ತಿದ್ದಾರೆ. ಜೆಡಿಎಸ್‍ನವರನ್ನು ಸಮಾಧಾನಪಡಿಸಲು ಆ ರೀತಿ ಹೇಳುತ್ತಿದ್ದಾರೆ. ಅವರಿಗೆ ಸರ್ಕಾರ ಉರುಳುವುದು ಅಷ್ಟೇ ಬೇಕಿತ್ತು. ಸರ್ಕಾರ ತೆಗಿಬೇಕು ಎಂದು ಹೇಳಿದವರೇ ಅವರು ಎಂದು ಮುನಿರತ್ನ ತಿಳಿಸಿದ್ದಾರೆ.
ನಾವು ಮಾತ್ರ ಅತೃಪ್ತ ಶಾಸಕರಲ್ಲ, ಕಾಂಗ್ರೆಸ್‍ನಲ್ಲಿ 75 ಮಂದಿ ಅತೃಪ್ತರು ಇದ್ದಾರೆ. ಬೆಂಗಳೂರಿಗೆ ಬಂದು ಎಲ್ಲ ಬಂಡವಾಳ ಬಿಚ್ಚಿಡುತ್ತೇವೆ ಎಂದು ಹೇಳಿದ್ದಾರೆ.
ಕುಮಾರಣ್ಣ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ನಾಟಕ ಮಾಡಿದ್ದಾರೆ. ಕಾಂಗ್ರೆಸ್‍ನವರು ಮುಖ್ಯಮಂತ್ರಿಯಾಗಿದ್ದರೆ ಜೆಡಿಎಸ್‍ನವರು ಇವರಿಗೆ ಕಾಟ ಕೊಡುತ್ತಿದ್ದರು. ಇವರನ್ನು ಅವರು ನಂಬಲ್ಲ, ಅವರನ್ನು ಇವರು ನಂಬುವುದಿಲ್ಲ. ನಂಬಿಕೆ ಇಲ್ಲದವರ ನಡುವೆ ಮೈತ್ರಿ ಏರ್ಪಟ್ಟಿತ್ತು. ಇದು ಮನೆಯೊಂದು ಮೂರು ಬಾಗಿಲು ಅಲ್ಲ. ಮನೆಗೆ ಒಂದೇ ಬಾಗಿಲು, ಮನೆಯೊಳಗೆ ಮೂರು ಗುಂಪು ಎನ್ನುವಂತಾಗಿತ್ತು. ಸರ್ಕಾರ ತೆಗೆಯಲು 10 ತಿಂಗಳಿಂದ ಪ್ರಚೋದನೆ ಮಾಡಿದವರನ್ನು ದೇವರು ನೋಡಿಕೊಳ್ಳುತ್ತಾನೆ ಎಂದೆಲ್ಲಾ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮನ್ನು ಅನರ್ಹಗೊಳಿಸುವ ಬಗ್ಗೆ ಮೊದಲೇ ಗೊತ್ತಿತ್ತು. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ಮುಂದಿನ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.